ಡ್ರಗ್ಸ್ ದಂಧೆ: ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ನಿಶ್ಚಿತ- ಸಚಿವ ರಮೇಶ್ ಜಾರಕಿಹೊಳಿ

Update: 2020-09-10 14:24 GMT

ಬೆಂಗಳೂರು, ಸೆ. 10: ಮಾದಕ ದ್ರವ್ಯ(ಡ್ರಗ್ಸ್) ವಿಚಾರದಲ್ಲಿ ರಾಜ್ಯ ಸರಕಾರ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ಆರೋಪಕ್ಕೆ ಸಿಲುಕಿರುವ ಚಿತ್ರನಟಿ ರಾಗಿಣಿ ಬಿಜೆಪಿಗೆ ಪರ ಪ್ರಚಾರ ಮಾಡಿದ್ದಾರೆ. ನಟಿ ಅನ್ನುವ ಕಾರಣಕ್ಕೆ ಪಕ್ಷ ಪ್ರಚಾರಕ್ಕಾಗಿ ಅವರನ್ನು ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಅವರ ಮೇಲೆ ಈ ಆರೋಪ ಇರಲಿಲ್ಲ. ಎಲ್ಲ ಮುಖಂಡರೊಂದಿಗೆ ಆಕೆ ಇರುವ ಭಾವಚಿತ್ರಗಳಿವೆ. ಆದರೆ, ಪ್ರಕರಣ ತನಿಖಾ ಹಂತದಲ್ಲಿರುವ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಸರಕಾರ ಕ್ರಮ ವಹಿಸಲಿದೆ ಎಂದರು.

ಸಂಪುಟ ಸೇರ್ಪಡೆಗೆ ಕಾಯಬೇಕು: ಸಚಿವ ಸಂಪುಟ ಸೇರ್ಪಡೆಗೆ ಕಾಯಬೇಕಾಗುತ್ತಿದೆ. ನಾವೇ 14 ತಿಂಗಳು ಕಾದಿದ್ದೇವೆ. ಕೋರ್ಟ್ ಮೆಟ್ಟಿಲನ್ನು ಏರಿ ಗೆದ್ದು ಬಂದಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಟರು ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಪರಿಷತ್ ಸದಸ್ಯರಾಗಿರುವ ಎಚ್. ವಿಶ್ವನಾಥ್, ಆರ್. ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ವಿಜಯೇಂದ್ರ ಬಿಜೆಪಿಯ ಹೆಮ್ಮೆ

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮೇಲೆ ಆರೋಪ ಸಲ್ಲ. ಯುವ ನಾಯಕರಾಗಿ ಗುರುತಿಸಿಕೊಂಡಿರುವ ಅವರು ಬಿಎಸ್‍ವೈ ಅವರಂತೆಯೆ ಬೆಳೆಯುವ ಉದ್ದೇಶದಿಂದ ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಪಕ್ಷ ಸೇರಿದಂತೆ ಯಾರೊಬ್ಬರೂ ಅಡ್ಡಿಪಡಿಸುವುದು ಸರಿಯಲ್ಲ, ವಿಜಯೇಂದ್ರ ಬಿಜೆಪಿಯವರಿಗೆ ಹೆಮ್ಮೆ.

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News