1998, 1999ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕ ವಿಚಾರ: ಮಹತ್ವದ ತೀರ್ಪು ಪ್ರಕಟಿಸಿದ ಕೆಎಟಿ

Update: 2020-09-15 13:20 GMT

ಬೆಂಗಳೂರು, ಸೆ.10: 1998 ಹಾಗೂ 1999ನೆ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮಹತ್ವದ ತೀರ್ಪು ಪ್ರಕಟಿಸಿದ್ದು, ಹೈಕೋರ್ಟ್ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗ 2019ರ ಜ.25 ಹಾಗೂ ಆ.22ರಂದು ಪ್ರಕಟಿಸಿದ್ದ ಎರಡೂ ಆಯ್ಕೆ ಪಟ್ಟಿಗಳನ್ನು ಅನೂರ್ಜಿತಗೊಳಿಸಿದೆ.

ಅಲ್ಲದೆ, ಹಿಂದೆ 2002ರಲ್ಲಿ ಅಂದಿನ ನ್ಯಾ. ಆರ್.ವಿ. ರವೀಂದ್ರನ್ ಅವರಿದ್ದ ನ್ಯಾಯಪೀಠ ನೀಡಿದ್ದ ಆದೇಶದಂತೆ ಕೆಪಿಎಸ್‍ಸಿ ಹೊಸದಾಗಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಆದೇಶಿಸಿದೆ. ಎಸ್.ಎಸ್. ಮಧುಕೇಶ್ವರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ಕೆಎಟಿ ಅಧ್ಯಕ್ಷ ಡಾ.ಕೆ.ಭಕ್ತವತ್ಸಲ ಮತ್ತು ಸದಸ್ಯ ಎಸ್.ಕೆ.ಪಟ್ನಾಯಕ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಅರ್ಜಿದಾರರು, 2016ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರಕಾರ ಜಾರಿಗೊಳಿಸಿಲ್ಲ. ಅದರಿಂದ ಹೊರಬರಲು ಸರಕಾರ ಹೊಸ ಕಾಯ್ದೆ ಜಾರಿಗೊಳಿಸಿದೆ. ಅಲ್ಲದೆ, ಎರಡು ಮತ್ತು ಮೂರನೇ ಮೌಲ್ಯಮಾಪನದ ಅಂಕಗಳಲ್ಲಿ 20ಕ್ಕಿಂತ ಹೆಚ್ಚು ಕಡಿಮೆ ವ್ಯತ್ಯಾಸ ಬಂದರೆ ಅಂತಹ ಪತ್ರಿಕೆಗಳನ್ನು ಮೂರನೇ ಮೌಲ್ಯಮೌಪನಕ್ಕೆ ಒಪ್ಪಿಸಬೇಕು ಎಂದು ನೀಡಿದ್ದ ಆದೇಶ ಪಾಲನೆ ಮಾಡಿಲ್ಲ ಎಂದು ದೂರಿದ್ದರು.

ಇದಕ್ಕೆ ಕೆಪಿಎಸ್‍ಸಿ, ಮೊದಲಿಗೆ ಹೈಕೋರ್ಟ್ ಆದೇಶದಂತೆ ಸಿದ್ಧಪಡಿಸಿರುವ ಆಯ್ಕೆಪಟ್ಟಿಗಳನ್ನು ಹೈಕೋರ್ಟ್ ಒಪ್ಪಿದೆ, ಆನಂತರ ಸುಪ್ರೀಂಕೋರ್ಟ್ ಕೂಡ ಅದನ್ನು ಅನುಮೋದಿಸಿದೆ. ಹಾಗಾಗಿ ಯಾವೊಬ್ಬ ಅಭ್ಯರ್ಥಿಗಳು ಕೆಎಟಿ ಮುಂದೆ ತಮ್ಮ ಕುಂದುಕೊರತೆ ಮಂಡಿಸಲು ಅವಕಾಶವಿಲ್ಲ. ಅಲ್ಲದೆ, ಹೈಕೋರ್ಟ್ 2016ರಲ್ಲಿ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹಾಗಾಗಿ ಕೆಎಟಿಗೆ ಮತ್ತೆ ಆ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ವಾದ ಮಂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News