'ಹಿಂದಿ ದಿವಸ್' ವಿರೋಧಿಸಿ 'ಕನ್ನಡ ಭಾಷೆ-ದ್ರಾವಿಡ ಅಸ್ಮಿತೆ' ಉಳಿಸಲು ರಾಜ್ಯಾದ್ಯಂತ ಆಂದೋಲನ

Update: 2020-09-10 16:12 GMT

ಬೆಂಗಳೂರು, ಸೆ. 10: ಕೇಂದ್ರ ಸರಕಾರದ ಹಿಂದಿ ಹೇರಿಕೆ ಹಾಗೂ ಅಕ್ಟೋಬರ್ 14ಕ್ಕೆ 'ಹಿಂದಿ ದಿವಸ್' ಆಚರಣೆಯನ್ನು ವಿರೋಧಿಸಿ `ಹಿಂದಿ ಗೊತ್ತಿಲ್ಲ ಹೋಗೋ ನಾವು ಕನ್ನಡಿಗರು, ನಾವು ದ್ರಾವಿಡರು' ಘೋಷಣೆಯಳ್ಳ ಟೀ ಶರ್ಟ್ ಅನ್ನು ಬಿಡುಗಡೆ ಮಾಡುವ ಮೂಲಕ 'ದ್ರಾವಿಡ ಆರ್ಮಿ' ರಾಜ್ಯಾದ್ಯಂತ ಹಿಂದಿ ಹೇರಿಕೆ ವಿರೋಧಿ ಆಂದೋಲನವನ್ನು ನಡೆಸಲು ನಿರ್ಧರಿಸಿದೆ.

ಗುರುವಾರ ಇಲ್ಲಿನ ಶೇಷಾದ್ರಿಪುರಂನಲ್ಲಿರುವ ಚಿತ್ರನಟ ‘ಆ ದಿನಗಳು’ ಖ್ಯಾತಿಯ ಚೇತನ್ ಅವರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ `ಹಿಂದಿ ಗೊತ್ತಿಲ್ಲ ಹೋಗೋ ನಾವು ಕನ್ನಡಿಗರು, ನಾವು ದ್ರಾವಿಡರು' ಎಂಬ ಘೋಷಣೆಯುಳ್ಳ ಟೀ ಶರ್ಟ್ ಗಳನ್ನು ನಟ ಚೇತನ್ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚೇತನ್, ಸ್ವಾತಂತ್ರ್ಯ ಬಂದ ಎಪ್ಪತ್ತ್ಮೂರು ವರ್ಷಗಳಿಂದಲೂ ದಿಲ್ಲಿ ಮೂಲದವರ ಹಿಂದಿ ಹೇರಿಕೆಯ ದಬ್ಬಾಳಿಕೆಯನ್ನು ನಾವು ದ್ರಾವಿಡರು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

2014ರ ನಂತರ ನಮ್ಮ ದೇಶದಲ್ಲಿ ಹಿಂದಿ ಎಂದರೆ ಭಾರತೀಯ, ಹಿಂದಿ ಗೊತ್ತಿಲ್ಲ ಎಂದರೆ ಅವನು ಭಾರತೀಯನೇ ಅಲ್ಲ ಎಂಬ ಮನೋಭಾವ ಬೆಳೆಯುತ್ತಿದ್ದು, ಇದು ಸರಿಯಲ್ಲ. ಹಿಂದಿ ಭಾಷೆಗಷ್ಟೇ ಪ್ರಾಮುಖ್ಯತೆ ನೀಡಿ ಉಳಿದ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಉರ್ದು, ತುಳು, ಬೆಂಗಾಲಿ ಸೇರಿದಂತೆ ಇನ್ನಿತರ ಹತ್ತು ಹಲವು ಭಾಷೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಚೇತನ್ ಆಕ್ಷೇಪಿಸಿದರು.

ರಾಷ್ಟ್ರದಲ್ಲಿ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತದೆ. ಆದರೆ, ಕನ್ನಡ ದಿವಸ್, ತಮಿಳ್ ದಿವಸ್ ಏಕಿಲ್ಲ. ಹಿಂದಿ ಭಾಷೆಯಷ್ಟೇ ಶ್ರೇಷ್ಠ ಎಂಬುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಅಲ್ಲದೆ, ಒಂದು ಭಾಷೆಗಷ್ಟೇ ಮಹತ್ವ ನೀಡುವ ಮೂಲಕ ಉಳಿದ ಭಾಷೆಗಳನ್ನು ಕಡೆಗಣಿಸುವುದು ಅಕ್ಷಮ್ಯ ಎಂದು ಟೀಕಿಸಿದ ಅವರು, 12ನೇ ಶತಮಾನದಲ್ಲಿ ಹುಟ್ಟಿದ ವಚನ ಚಳವಳಿ ಮೂಲದಲ್ಲಿ ಅದು ಭಾಷಾ ಚಳವಳಿಯೇ ಆಗಿತ್ತು ಎಂದು ಹೇಳಿದರು.

ಕನ್ನಡಿಗರಾಗಿ ನಮ್ಮ ನಾಡಿನಲ್ಲಿ ಹುಟ್ಟಿದ ವಿಚಾರವಾದಿ ತಂದೆ ಪೆರಿಯಾರ್ ಅವರು `ದ್ರಾವಿಡ ಆಸ್ಮಿತೆ' ಎತ್ತಿಹಿಡಿಯಲು ಹೋರಾಟ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ತುಳು, ಮಲಯಾಳ ಹಾಗೂ ಹಿಂದಿ ಸೇರಿ ಎಲ್ಲ ಭಾಷೆಗಳನ್ನು ಒಂದೆ ಸಮನಾಗಿ ನೋಡಬೇಕು. ಎಲ್ಲ ಭಾಷೆಗಳಿಗೂ ಪ್ರಾತಿನಿಧ್ಯ, ಪ್ರಾಶಸ್ತ್ಯವನ್ನು ನೀಡಬೇಕು. ಹೀಗಾಗಿ ಅಕ್ಟೋಬರ್ 14ರ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಕನ್ನಡ ಭಾಷೆ ಉಳಿಸಿ-ಬೆಳೆಸಲು ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಚೇತನ್ ತಿಳಿಸಿದರು.

ಕನ್ನಡ ಭಾಷೆಯನ್ನು ಶಿಕ್ಷಣ, ಆರ್ಥಿಕ, ಸಿನೆಮಾ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಬೆಳೆಸಬೇಕಿದೆ. ಹಿಂದಿ ಹೇರಿಕೆಯನ್ನು ವಿರೋಧಿಸಿ ಬೀದಿಗೆ ಇಳಿಯಬೇಕು. ನಮ್ಮ ಸಹೋದರರಾದ ನೆರೆ ರಾಜ್ಯಗಳ ಜನರಿಗೆ ನಮ್ಮ ಭಾಷೆಯನ್ನು ಕಲಿಸೋಣ. ಯಾವುದೇ ಕಾರಣಕ್ಕೂ ಹಿಂಸೆ, ಬಲವಂತದ ಹೇರಿಕೆಯಿಂದ ಭಾಷೆ ಬೆಳೆಯುವುದಿಲ್ಲ. ಸೌಹಾರ್ದ ಮತ್ತು ಸಾಮರಸ್ಯದಿಂದ ಭಾಷೆ ಕಲಿಸಬೇಕು. ಕನ್ನಡವೇ ನಮ್ಮ ರಾಷ್ಟ್ರ ಭಾಷೆ. ಹೀಗಾಗಿ ಭಾಷಾ ಹೋರಾಟದ ಮೂಲಕ ನಮ್ಮ ಆಸ್ಮಿತೆ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಚೇತನ್ ಕರೆ ನೀಡಿದರು.

ಈ ವೇಳೆ ದ್ರಾವಿಡ ಆರ್ಮಿ ರಾಜ್ಯಾಧ್ಯಕ್ಷ ಸಂಪತ್ ಸುಬ್ಬಯ್ಯ, ಮುಖಂಡರಾದ ಲಲ್ಲೂ ಮತ್ತು ಸ್ನೇಹಿತರು, ಹಾಸನ್ ಪ್ರಕಾಶ್, ಮಹೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೇಂದ್ರ ಸರಕಾರದ ಅಕ್ಟೋಬರ್ 14ಕ್ಕೆ ನಡೆಸಲಿರುವ `ಹಿಂದಿ ದಿವಸ್' ವಿರೋಧಿಸಿ ಕನ್ನಡ ಭಾಷೆ ನಮ್ಮ ರಾಷ್ಟ್ರ ಭಾಷೆ, ನಮ್ಮ ದ್ರಾವಿಡ ಆಸ್ಮಿತೆ ಉಳಿಸಲು ಕನ್ನಡಿಗರೆಲ್ಲರೂ ಒಗ್ಗೂಡಿ ಭಾಷೆ ಉಳಿವಿಗಾಗಿ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ಯುವಕರು ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಈ ಹೋರಾಟಕ್ಕೆ ಚಿತ್ರನಟ ಚೇತನ್ ಅವರು ನೇತೃತ್ವ ವಹಿಸಿದ್ದಾರೆ

-ಸಂಪತ್ ಸುಬ್ಬಯ್ಯ, ದ್ರಾವಿಡ ಆರ್ಮಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News