ನಿರ್ಮಾಪಕ ಆನಂದ್ ಅಪ್ಪುಗೋಳಗೆ ಸೇರಿದ 31 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಈಡಿ

Update: 2020-09-10 14:59 GMT

ಬೆಂಗಳೂರು, ಸೆ. 10: ಸಾರ್ವಜನಿಕರಿಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಆನಂದ್ ಬಾಲಕೃಷ್ಣ ಅಪ್ಪುಗೋಳ ಅವರಿಗೆ ಸೇರಿದ 31.35 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳ ಅವರು `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಘ'ದ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಕಾಳಧನ ಸಕ್ರಮ ಕಾಯ್ದೆಯಡಿ ಆನಂದ ಅಪ್ಪುಗೋಳ ಅವರಿಗೆ ಸೇರಿದ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೆಶನಾಲಯ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದೆ.

ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸಹಕಾರ ಸಂಘವನ್ನು ಸ್ಥಾಪಿಸಿದ್ದು, ಅದರ ಅಧ್ಯಕ್ಷರೂ ಆಗಿದ್ದ ಆನಂದ ಅಪ್ಪುಗೋಳ ಅವರು ಠೇವಣಿದಾರರಿಗೆ ಸುಮಾರು 250 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಹಣವನ್ನು ವಂಚಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳ ಅವರಿಗೆ ಸೇರಿದ ಬಂಗಲೆಗಳು ಮತ್ತು ಇತರ ಆಸ್ತಿಗಳನ್ನು ಹರಾಜು ಹಾಕುವಂತೆ ಕೋರಿ ಸ್ಥಳೀಯ ಆಡಳಿತವು ಕಳೆದ ಜೂನ್ ತಿಂಗಳಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆಸ್ತಿ ಹರಾಜಿನಲ್ಲಿ ಬಂದ ಹಣವನ್ನು ಠೇವಣಿದಾರರಿಗೆ ಹಂಚುವುದು ಜಿಲ್ಲಾಡಳಿತದ ಲೆಕ್ಕಾಚಾರವಾಗಿತ್ತು ಎಂದು ಮೂಲಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News