ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ: ಝಮೀರ್ ಅಹ್ಮದ್ ರನ್ನು ಯಾಕೆ ಬಂಧಿಸಿಲ್ಲ- ಪ್ರತಾಪ್ ಸಿಂಹ ಪ್ರಶ್ನೆ

Update: 2020-09-10 16:20 GMT

ಮೈಸೂರು,ಸೆ.10: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪದ ತನಿಖೆ ನಡೆಯುತ್ತಿದ್ದು, ಈ ವಿಚಾರದಲ್ಲಿ ಶಾಸಕ ಝಮೀರ್ ಅಹ್ಮದ್ ಅವರ ಹೆಸರು ಇದೆ. ಅವರನ್ನು ಯಾಕೆ ಬಂಧಿಸಿಲ್ಲವೆಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಝಮೀರ್ ಅಹ್ಮದ್ ಅವರ ಹೆಸರು ಪಟ್ಟಿಯಲ್ಲಿದ್ದರೂ ಸಹ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ತನಿಖಾಧಿಕಾರಿಗಳಿಗೆ ಅಗತ್ಯ ಎನಿಸಿದರೆ ಪ್ರಶಾಂತ್ ಸಂಬರಗಿ ಅವರನ್ನೂ ವಿಚಾರಣೆಗೆ ಒಳಪಡಿಸಲಿ. ಅವರ ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೆ ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಲಿ ಎಂದು ಹೇಳಿದರು.

ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರೋದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರೆಸಿಕೊಳ್ಳುವುದು ಸಹಜ. ಆದರೆ, ಗೃಹ ಸಚಿವರು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದರು.

ಇನ್ನು ದಸರಾ ಉದ್ಘಾಟನೆ ಕುರಿತು ಮಾತನಾಡಿದ ಅವರು, ಕೊರೋನ ವಾರಿಯರ್ಸ್ ಗಳಿಂದ ದಸರಾ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ. ವೈದ್ಯಕೀಯ ಕ್ಷೇತ್ರದಿಂದ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ಅವರನ್ನು ವೈದ್ಯರ ಪರವಾಗಿ ಉದ್ಘಾಟನೆಗೆ ಬರುವಂತೆ ಕೇಳಲಾಗುವುದು ಎಂದು ತಿಳಿಸಿದರು.

ಇನ್ನು ಪೊಲೀಸ್ ಇಲಾಖೆಗೂ ಅವಕಾಶ ಕೊಡುವಂತೆ ಉನ್ನತಮಟ್ಟದ ಸಭೆಯಲ್ಲಿ ಕೇಳಿದ್ದೆ. ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ಅವರಿಂದ ದಸರಾ ಉದ್ಘಾಟನೆ ಮಾಡಿಸಬಹುದು ಎಂದು ಹೇಳಿದ್ದೇನೆ. ಅದರಂತೆ ಉದ್ಘಾಟನೆಯಲ್ಲಿ 5 ಇಲಾಖೆಯ ಕೊರೋನ ವಾರಿಯರ್ಸ್ ಗಳನ್ನು ಕರೆಸಿ ಸನ್ಮಾನ ಮಾಡಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ದಸರಾ ಉದ್ಘಾಟನಾ ಭಾಷಣಕ್ಕೆ ಒಬ್ಬರಿಗೆ ಅವಕಾಶ ಇರೋದು. ಆ ಅವಕಾಶವನ್ನು ಡಾ.ಮಂಜುನಾಥ್ ಅವರಿಗೆ ನೀಡುವಂತೆ ಕೋರುತ್ತೇನೆ. ಐವರು ಕೊರೋನ ವಾರಿಯರ್ಸ್ ಗಳ ಆಯ್ಕೆ ಮಾಡುವುದು ಸವಾಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News