ಮಕ್ಕಳ ನಿರಂತರ ಕಲಿಕೆಗೆ ‘ವಿದ್ಯಾಗಮ’ ಪೂರಕ: ಎಸ್.ಸುರೇಶ್‍ ಕುಮಾರ್

Update: 2020-09-10 17:07 GMT

ಧಾರವಾಡ, ಸೆ.10: ಮಕ್ಕಳನ್ನು ಕೊರೋನ ಸೋಂಕಿನಿಂದ ರಕ್ಷಿಸುವುದು ಹಾಗೂ ನಿರಂತರವಾಗಿ ಕಲಿಕೆಯ ಸಂಪರ್ಕದಲ್ಲಿ ಇರಿಸುವ ಉದ್ದೇಶದಿಂದ ರಾಜ್ಯಾದ್ಯಂತ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೂ ವಿದ್ಯಾಗಮ ಸಹಕಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಹೇಳಿದರು.

ಗುರುವಾರ ಧಾರವಾಡ ಜಿಲ್ಲೆಯ ಸಲಕಿನಕೊಪ್ಪ ಮತ್ತು ಬಾಡ ಗ್ರಾಮಗಳಲ್ಲಿ ವಿದ್ಯಾಗಮ ಚಟುವಟಿಕೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳು ಪ್ರಾರಂಭವಾಗುವುದು ಇನ್ನೂ ವಿಳಂಬವಾಗುವ ಸಾಧ್ಯತೆಗಳು ಇರುವುದರಿಂದ ಮಕ್ಕಳು ಶಿಕ್ಷಣ ಮತ್ತು ಪಠ್ಯದಿಂದ ದೂರವಾಗಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಈಡಾಗುವ ಸಂಭವ ತಪ್ಪಿಸಲು ವಿದ್ಯಾಗಮ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಶಾಲೆಯಿಂದ ಮಕ್ಕಳು ಹೊರಗುಳಿದರೆ ಅವರನ್ನು ಪುನಃ ಮುಖ್ಯವಾಹಿನಿಗೆ ಕರೆತರುವುದು ಕಷ್ಟವಾಗಲಿದೆ. ಸರಕಾರಿ ಶಾಲೆಗಳಷ್ಟೇ ಅಲ್ಲದೇ ಖಾಸಗಿ ಶಾಲೆಗಳು ಕೂಡಾ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಳಿಸಬಹುದು ಅಥವಾ ಇದಕ್ಕಿಂತಲೂ ಉತ್ತಮವಾದ ಚಟುವಟಿಕೆಯೊಂದಿಗೆ ಮಕ್ಕಳ ಸಂಪರ್ಕ ಹೊಂದಿರಬೇಕು ಎಂದು ಸುರೇಶ್‍ ಕುಮಾರ್ ಹೇಳಿದರು.

ವಿದ್ಯಾಗಮ ಯಶಸ್ವಿಗೆ ಧಾರವಾಡ ವಿಭಾಗದ ಶಿಕ್ಷಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಸರದಿ ಆಧಾರದಲ್ಲಿ ಎಲ್ಲ ಪ್ರದೇಶಗಳಲ್ಲಿ ಶಿಕ್ಷಕರು ತೆರಳಿ ಪಠ್ಯದ ಕುರಿತು ಮಕ್ಕಳಲ್ಲಿರುವ ಸಂದೇಹಗಳನ್ನು ನಿವಾರಿಸುತ್ತಿದ್ದಾರೆ. ಇದು ಶಾಲೆಯ ಬಗ್ಗೆ ಮಕ್ಕಳ ಆಸಕ್ತಿಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ಇತ್ತೀಚಿಗೆ ಜರುಗಿದ ಎಸೆಸೆಲ್ಸಿ ಪರೀಕ್ಷೆ ವೇಳೆ ಈ ಭಾಗದ ಪ್ರೌಢಶಾಲಾ ಶಿಕ್ಷಕರು ತಮ್ಮ ಮೋಟಾರ್ ಬೈಕ್‍ಗಳ ಮೂಲಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಮಾರ್ಗದರ್ಶನ ಮಾಡಿದ್ದು ಪ್ರಶಂಸನೀಯವಾಗಿದೆ. ಇಂತಹ ಪ್ರಯತ್ನಗಳಿಂದ ಅನೇಕ ದುರ್ಬಲ ಮತ್ತು ಅನಾರೋಗ್ಯ ಪೀಡಿತ ಮಕ್ಕಳು ಕೂಲಿಕಾರರು ಹಾಗೂ ಕಾರ್ಮಿಕರ ಮಕ್ಕಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿದೆ ಎಂದು ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಮೋಹನಕುಮಾರ್ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ಕನವರ, ಶಿಕ್ಷಕರಾದ ಪಿ.ಎಂ. ಪಾಟೀಲ, ಜಿ.ಎಂ. ಕೋಟಿಗೌಡರ, ಜಿನ್ನಿ ತರಗಲ್, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಭಾವಿ ಮತ್ತಿತರರು ಇದ್ದರು.

ಕೊರೋನ ಶುಲ್ಕ ಸಂಗ್ರಹಿಸಿದರೆ ಕಾನೂನು ಕ್ರಮ

ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ‘ಕೊರೋನ ಶುಲ್ಕ’ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಅಂತಹ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ. ನಿಯಮಬಾಹಿರವಾಗಿ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ದುಡಿಯುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಯ ಹಿತ ಕಾಯಬೇಕು. ಮಕ್ಕಳಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಾಪಾರಿಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಖರೀದಿಸಲು ಸೂಚನೆ ನೀಡಬಾರದು ಎಂದು ಅವರು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News