ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹತ್ಯೆಗೆ ಸಂಚು: ಆಘಾತಕಾರಿ ವಿಚಾರ ತಡವಾಗಿ ಬೆಳಕಿಗೆ

Update: 2020-09-10 17:24 GMT

ಚಿಕ್ಕೋಡಿ, ಸೆ.10: ಮೌಢ್ಯ ವಿರೋಧಿ ಕಾರ್ಯಕ್ರಮ, ತಮ್ಮ ಕಾರಿಗೆ ಸ್ಮಶಾನದಲ್ಲಿ ಪೂಜೆ ನೆರವೇರಿಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದೆ.

ಯುವಕರ ಗುಂಪೊಂದು ಟೈಗರ್ ಗ್ಯಾಂಗ್ ಎಂಬ ಹೆಸರಿನಲ್ಲಿ 15 ವರ್ಷಗಳ ಹಿಂದೆಯೇ ಹೆಸರು ಮಾಡಬೇಕೆಂಬ ಉದ್ದೇಶದಿಂದ ಸತೀಶ್ ಜಾರಕಿಹೊಳಿ ಅವರ ಹತ್ಯೆಗೆ ಸಂಚು ರೂಪಿಸಿತ್ತು ಎನ್ನಲಾಗಿದೆ. ಆದರೆ, ಆ ವಿಚಾರ ಈಗ ಬೆಳಕಿಗೆ ಬಂದಿದೆ. ಇದೇ ಗ್ಯಾಂಗ್‌ನ 9 ಜನ ಸದಸ್ಯರು ಸದ್ಯ ಗೋಕಾಕ್‌ನ ದಲಿತ ಯುವಕನ ಹತ್ಯೆಯ ಪ್ರಕರಣದಲ್ಲಿ ಹಿಂಡಲಗಾ ಜೈಲು ಸೇರಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾದ ಪ್ರಮುಖ ಆರೋಪಿ ನಾಗರಾಜ್ ಜಂಬಗಿ ಬಾಗಲಕೋಟೆಯ ಕಾರಾಗೃಹದಲ್ಲಿದ್ದಾನೆ. ಈತ ಬರೆದಿಟ್ಟಿದ್ದ ಡೈರಿಯಿಂದಲೇ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಸ್ವತಃ ಸತೀಶ್ ಜಾರಕಿಹೊಳಿಯವರೇ ಹೇಳುವಂತೆ ''ಕಳೆದ 15 ವರ್ಷಗಳ ಹಿಂದೆ ಈ ಗ್ಯಾಂಗ್ ಹಳೆ ಸದಸ್ಯರು ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಈ ಬಗ್ಗೆ ಸ್ವತಃ ಪೊಲೀಸರು ನನಗೆ ತಿಳಿಸಿದ್ದಾರೆ. ಸದ್ಯ ಆ ಪ್ರಕರಣ ಮುಗಿದು ಹೋಗಿದೆ. ಈಗ ಪೊಲೀಸರು ಆ ಗ್ಯಾಂಗ್‌ನ ಸದಸ್ಯರನ್ನು ಬಂಧನ ಮಾಡಿದ್ದಾರೆ. ಪೊಲೀಸರು ಇಂಥ ಗ್ಯಾಂಗ್‌ನ್ನು ಸಂಪೂರ್ಣ ಮಟ್ಟ ಹಾಕಬೇಕು'' ಎಂದು ಅವರು ಒತ್ತಾಯಿಸಿದ್ದಾರೆ.

ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಹಲವರನ್ನು ಕರೆಸಿ ವಿಚಾರಣೆ ನಡೆಸಿದ್ದೇವೆ. ಬೇರೆ ಪ್ರಕರಣಗಳಲ್ಲಿ ಟೈಗರ್ ಗ್ಯಾಂಗ್‌ನ ಸದಸ್ಯರು ಜೈಲಿನಲ್ಲಿದ್ದಾರೆ, ಅವರ ವಿಚಾರಣೆಯೂ ನಡೆಯುತ್ತಿದೆ. ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಇನ್ನು ಯಾರನ್ನೂ ಬಂಧಿಸಿಲ್ಲ. ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.
-ಮನೋಜ್‌ ಕುಮಾರ್ ನಾಯಕ್, ಚಿಕ್ಕೋಡಿ ಡಿಎಸ್‌ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News