ಬಿಜೆಪಿಯವರಿಗೆ ಕೃಷಿ ಗೊತ್ತಿಲ್ಲ: ಬಡಗಲಪುರ ನಾಗೇಂದ್ರ ಕಿಡಿ

Update: 2020-09-10 18:06 GMT

ಮೈಸೂರು,ಸೆ.10: ಬಿಜೆಪಿಯವರಿಗೆ ಕೃಷಿ ಗೊತ್ತಿಲ್ಲ, ಕೇವಲ ಸುಳ್ಳು ಹೇಳೋದೆ ಅವರ ಕಾರ್ಯವಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿ ಕಾರಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ಬಿಟಿಯವರಿಗೆ ಕೃಷಿ ಭೂಮಿ ಬೇಕಿದ್ದರೆ ನಾವು ಕೊಡುತ್ತೇವೆ. ಎರಡು ವರ್ಷ ಎರಡು ಎಕರೆ ಭೂಮಿ ಕೊಡುತ್ತೇವೆ  ಐಟಿ ಬಿಟಿ ಯವರು ನಮ್ಮನ್ನು ಸಂಪರ್ಕಿಸಲಿ ಎಂದರು.

ಆನೇಕಲ್ ಚಿಕ್ಕಬಳ್ಳಾಪುರದ ಅಕ್ಕ ಪಕ್ಕ ಭೂಮಿ ಕೃಷಿಗೆ ಯೋಗ್ಯವಲ್ಲ. ಇದೆಲ್ಲವೂ ಕೈಗಾರಿಕೆಗೆ ಅನುಕೂಲ ಮಾಡುವಂತಹ ಹುನ್ನಾರ ಎಂದರು. ಬಿಜೆಪಿಯವರಿಗೆ ಕೃಷಿ ಗೊತ್ತಿಲ್ಲ. ಕೇವಲ ಸುಳ್ಳು ಹೇಳೋದೇ ಅವರ ಕಾರ್ಯವಾಗಿದೆ. ಅವರೆಲ್ಲ ಭೂಮಿ ಉತ್ತವರಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಬೆಂಬಲ ಬೆಳೆ ನೀತಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಕೇಂದ್ರ ಸರ್ಕಾರ 18 ಬೆಳೆಗಳನ್ನು ಬೆಂಬಲ ಬೆಲೆ ಪಟ್ಟಿಗೆ ಸೇರಿಸಿದೆ. ಅದರಲ್ಲಿ ಮೆಕ್ಕೆಜೋಳ ಬೆಳೆಯೂ ಸೇರಿದೆ. ಆದರೆ ನಿರೀಕ್ಷಿತ ಪ್ರಮಾಣದ ಬೆಂಬಲ ಬೆಲೆ ರೈತರ ಕೈ ಸೇರುತ್ತಿಲ್ಲ. ತಂಬಾಕು ಬೆಳೆಗಾರರ ಪರಿಸ್ಥಿತಿಯೂ ಶೋಚನೀಯವಾಗಿದೆ. ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ರೈತರಿಗೆ ಬೆಳೆ ಸಮೀಕ್ಷೆ ಹೇಗೆ ಮಾಡಬೇಕೆಂಬುದರ ಕುರಿತು ಸರಿಯಾದ ಮಾಹಿತಿಯೇ ಇಲ್ಲ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಧೋರಣೆಯಿಂದ ರೈತರು ಬೇಸತ್ತಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News