ಎಸ್‍ಡಿಪಿಐ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ: ಇಲ್ಯಾಸ್ ತುಂಬೆ
ಬೆಂಗಳೂರು, ಸೆ.11: ಎಸ್‍ಡಿಪಿಐ ಕಚೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯ ಭಾಗವಾಗಿ ಎಸ್‍ಡಿಪಿಐ ಕಚೇರಿಗಳಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವಿಷಯವನ್ನೇ ಆಧರಿಸಿ ಕೆಲವು ಮಾಧ್ಯಮಗಳು ಎಸ್‍ಡಿಪಿಐ ಕಚೇರಿ ಮೇಲೆ ದಾಳಿ, ಮಾರಾಕಾಸ್ತ್ರಗಳು ಪತ್ತೆ ಎಂಬ ಸುಳ್ಳು ವರದಿಯನ್ನು ಬಿತ್ತರಿಸಿವೆ. ಪೊಲೀಸರ ಪರಿಶೀಲನೆ ವೇಳೆ ಎಸ್‍ಡಿಪಿಐ ಕಚೇರಿಯಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ನೀಡಿರುವ ಮಹಜರು ಮತ್ತು ಪರಿಶೋಧನೆಯ ಪಂಚನಾಮೆಯಲ್ಲಿಯೂ ಮಾರಕಾಸ್ತ್ರಗಳ ಉಲ್ಲೇಖ ಮಾಡಿರುವುದಿಲ್ಲ. ಆದರೂ ಎಸ್‍ಡಿಪಿಐ ವಿರುದ್ಧ ಅಪಪ್ರಚಾರ ನಡೆಸಲು ಕೆಲವು ಮಾಧ್ಯಮಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ಮಾಧ್ಯಮಗಳು ಎಸ್‍ಡಿಪಿಐ ಪಕ್ಷವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿವೆ. ಹೀಗಾಗಿ ಇಂತಹ ಮಾಧ್ಯಮಗಳ ಮೇಲೆ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.