ಬ್ಲೂ ಫಿಲ್ಮ್ ನೋಡುವವರು ಡಿಸಿಎಂ ಆಗುತ್ತಿದ್ದಾರೆ ಎಂದು ಜನರಿಗೆ ನಗು ಬಂದಿತ್ತು: ಸವದಿಗೆ ಸಾ.ರಾ.ಮಹೇಶ್ ತಿರುಗೇಟು

Update: 2020-09-11 12:05 GMT

ಬೆಂಗಳೂರು, ಸೆ.11: ಬ್ಲೂ ಫಿಲ್ಮ್ ನೋಡುವ ಅಡಿಕ್ಷನ್ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯಸನವೇ, ಡ್ರಗ್ಸ್ ಆದರೂ, ಬ್ಲೂ ಫಿಲ್ಮಂ ಆದರೂ... ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.

ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೋಡಿ ನಗು ಬಂತು. ಅವರ ಮಾತು, ಕುಣಿಯಲು ಬರದವರು ನೆಲ ಡೊಂಕು ಎನ್ನುವಂತಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಟೀಕಿಸಿದ್ದರು.

ಇದಕ್ಕೆ ಇಂದು ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಸಾ.ರಾ.ಮಹೇಶ್, ಮಾಜಿ ಮುಖ್ಯಮಂತ್ರಿಯ ಮಾತಿಗೆ ಸವದಿ ಅವರಿಗೆ ನಗು ತರಿಸುವಂತಿದ್ದರೆ, ನೀಲಿ ಚಿತ್ರ ವೀಕ್ಷಣೆ ಮಾಡುವ ಅಡಿಕ್ಷನ್ ಉಳ್ಳವರು ಡಿಸಿಂ ಆಗುತ್ತಿದ್ದಾರೆ ಎಂದು ಜನರಿಗೆ ನಗು ಬಂದಿತ್ತು. ಅಸಲಿಗೆ ಎಲ್ಲವೂ ವ್ಯಸನವೇ ಡ್ರಗ್ಸ್ ಆದರೂ, ಬ್ಲೂ ಫಿಲ್ಮ್ ಆದರೂ ಎಂದು ತಿರುಗೇಟು ನೀಡಿದ್ದಾರೆ.

2012ರಲ್ಲಿ ಸದನ ನಡೆಯುತ್ತಿರುವಾಗಲೇ ಬ್ಲೂ ಫಿಲ್ಮ್ ನೋಡಿದ ಆರೋಪ ಲಕ್ಷ್ಮಣ ಸವದಿ ಅವರ ಮೇಲೆ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು ಎಂದು ಅವರು ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News