ಮೇಕೆದಾಟು, ಎತ್ತಿನಹೊಳೆ ಯೋಜನೆ: ಶೀಘ್ರವೇ ಹೊಸದಿಲ್ಲಿಗೆ ಸಿಎಂ ನೇತೃತ್ವದ ನಿಯೋಗ- ಸಚಿವ ರಮೇಶ್ ಜಾರಕಿಹೊಳಿ

Update: 2020-09-11 12:25 GMT

ಬೆಂಗಳೂರು, ಸೆ. 11: ರಾಜ್ಯದಲ್ಲಿನ ಮಹತ್ವದ ಮೇಕೆದಾಟು, ಎತ್ತಿನಹೊಳೆ ಯೋಜನೆ ಸಹಿತ ಬೃಹತ್ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇರುವ ತಾಂತ್ರಿಕ ಮತ್ತು ಕಾನೂನು ತೊಡಕುಗಳ ನಿವಾರಣೆಗೆ ತಕ್ಷಣದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಹೊಸದಿಲ್ಲಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಮತ್ತು ಎತ್ತಿನಹೊಳೆ ಯೋಜನೆಗಳ ಅನುಷ್ಠಾನಕ್ಕೆ ಕೆಲ ಕಾನೂನು ಮತ್ತು ತಾಂತ್ರಿಕ ತೊಡಕುಗಳಿವೆ. ಅವುಗಳನ್ನು ಪರಿಹರಿಸಲು ಕೋರಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಶೀಘ್ರದಲ್ಲೆ ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ 9 ಸಾವಿರ ಕೋಟಿ ರೂ. ಮೊತ್ತಕ್ಕೆ ಡಿಪಿಎಆರ್ ಅನ್ನು ಸಿದ್ದಪಡಿಸಿ 2019ರ ಜನವರಿ 18ಕ್ಕೆ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದ ಅವರು, ಕೊರೋನ ವೈರಸ್ ಸೋಂಕಿನ ಸಂಕಷ್ಟದ ಕಾರಣದಿಂದ ಈ ಬಾರಿ ಜಲಸಂನ್ಮೂಲ ಇಲಾಖೆಗೆ ಅನುದಾನ ಕಡಿಮೆಯಾಗಲಿದೆ. ಹೀಗಾಗಿ ಇರುವ ಮಿತಿಯಲ್ಲೇ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದರು.

ಅನುದಾನ ಕೊರತೆ ಸಾಧ್ಯತೆ ಹಿನ್ನೆಲೆಯಲ್ಲಿ ಇಲಾಖೆಗೆ ದೊರಕುವ ಅನುದಾನವನ್ನು ನೀರಾವರಿಯೇತರ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ನಿರ್ಬಂಧಿಸಲಾಗುವುದು ಎಂದ ಅವರು, ಪ್ರಸಕ್ತ ವರ್ಷ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಇದೆ. ವಿಶ್ವಬ್ಯಾಂಕ್ ನೆರವಿನ ಡ್ರಿಪ್ 1 ಮತ್ತು ಡ್ರಿಪ್ 2 ಯೋಜನೆಯಡಿ 52 ಅಣೆಕಟ್ಟೆಗಳ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದ್ದು 750 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಎತ್ತಿನಹೊಳೆ ಯೋಜನೆಯಡಿ ನೀರಿನ ಲಿಫ್ಟ್ ಘಟಕ ಮತ್ತು ಗುರುತ್ವ ಕಾಲುವೆ 31ನೆ ಕಿ.ಮೀ.ವರೆಗಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ 2021ರ ಮುಂಗಾರು ಹಂಗಾಮಿನಲ್ಲಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯ 61ನೆ ಕಿ.ಮೀ.ವರೆಗೆ ಹಾಗೂ ಹೊಳಲ್ಕೆರೆ ಫೀಡರ್ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲೇ ಪೂರ್ಣಗೊಳಿಸಲಾಗುವುದು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಎತ್ತಿನಹೊಳೆ ಯೋಜನೆಯಿಂದ ಆದಷ್ಟು ಶೀಘ್ರದಲ್ಲೆ ಚಿತ್ರದುರ್ಗ ಜಿಲ್ಲೆಯ 48 ಕೆರೆಗಳನ್ನು ತುಂಬಿಸಲು ಮತ್ತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಲಸಂಪನ್ಮೂಲ ಇಲಾಖೆಯಡಿ ನಾಲ್ಕು ನಿಗಮಗಳು ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಕಾರ್ಯಕ್ರಮಗಳ ನಿಗದಿತ ಗುರಿ ಸಾಧನೆ ಸೂಚನೆ ನೀಡಲಾಗಿದೆ ಎಂದರು.

ಮೈಸೂರಿನ ಕೆಆರ್‍ಎಸ್ ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. 425 ಕೋಟಿ ರೂ. ಮೊತ್ತದ ವಿಸ್ತøತ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ನಾಲ್ಕು ಹಂತದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಮೇಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News