ರಾಜ್ಯದಲ್ಲಿ ಶಾಲೆಗಳ ಪುನರ್ ಆರಂಭದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್

Update: 2020-09-11 13:33 GMT

ಬೆಂಗಳೂರು, ಸೆ. 11: ಮಹಾಮಾರಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶಾಲೆ-ಕಾಲೇಜುಗಳ ಪುನರ್ ಆರಂಭಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಪ್ರಕಟಿಸಿದ ಬಳಿಕ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುರೇಶ್ ಕುಮಾರ್, ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪಾಲಕರು ಯಾವಾಗ ಶಾಲೆ ಆರಂಭಿಸಲಾಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಎಲ್ಲರಿಗೂ ಸಹಜವಾಗಿಯೇ ಆತಂಕವಿದೆ. ಆದುದರಿಂದ ಈ ಬಗ್ಗೆ ಕೇಂದ್ರ ಸರಕಾರದ ತೀರ್ಮಾನದ ಬಳಿಕ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ದೇಶದ ರಕ್ಷಣಾ ನೀತಿಯ ಮಾದರಿಯಲ್ಲೇ ಹಲವು ವರ್ಷಗಳ ನಂತರ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ ಇದರ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರು ಹೇಳುವಂತೆ ಶಿಕ್ಷಣದ ನೀತಿ ಸರಕಾರದ ನೀತಿಯಲ್ಲ. ಬದಲಿಗೆ ನಮ್ಮ ಶಿಕ್ಷಣದ ರೀತಿಯಾಗಿದೆ ಎಂದ ಅವರು, ಭವಿಷ್ಯದ ಪ್ರಜೆಗಳನ್ನು ರೂಪಿಸಲು ನೂತನ ಶಿಕ್ಷಣ ನೀತಿ ನೆರವಾಗಲಿದೆ ಎಂದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹೊಣೆ ಶಿಕ್ಷಕರ ಮೇಲಿದೆ. ಈ ಸವಾಲನ್ನು ಎದುರಿಸಿದ ರೀತಿಯಲ್ಲಿ ಇದನ್ನು ಮಾಡಬೇಕು. ಈಗಾಗಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಶಾಲೆಗಳಲ್ಲಿ ಮಕ್ಕಳ ಸ್ನೇಹಿ ಕಾರ್ಯಕ್ರಮ ತಂದಿದ್ದೇವೆ. ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಬೇಕಿದ್ದ ಶಿಕ್ಷಕರ ದಿನಾಚರಣೆ ಸರಳವಾಗಿ ನಡೆಯುತ್ತಿದೆ. ಎಸೆಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ ಜಾರಿಗೆ ತಂದ ವಿದ್ಯಾಗಮ ಕಾರ್ಯಕ್ರಮ ದೇಶದ ಗಮನ ಸೆಳೆದಿದೆ ಎಂದು ನುಡಿದರು.

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸರಕಾರದ ನೆರವು

ಕೋವಿಡ್-19 ಹಿನ್ನೆಲೆಯಲ್ಲಿ 3.5 ಲಕ್ಷದಷ್ಟು ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರು ನಾಲ್ಕೈದು ತಿಂಗಳಿನಿಂದ ಸಂಕಷ್ಟದಲ್ಲಿದ್ದು, ಅವರಿಗೆ ನೆರವಿಗೆ ಸರಕಾರ ಬದ್ಧವಾಗಿದೆ. ಈ ಶಿಕ್ಷಕರಿಗೆ ಸರಕಾರ ಅಗತ್ಯ ಸಹಕಾರ ನೀಡಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರಿಗೆ ನೆರವು ನೀಡುವುದು ನಿಶ್ಚಿತ. ರಾಷ್ಟ್ರದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕರ್ನಾಟಕದ ಮೂವರು ಭಾಜನಾರಾಗಿರುವುದು ಶಿಕ್ಷಕ ವೃಂದಕ್ಕೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ'

-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News