×
Ad

ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ ನಿಂದ ಜನರ ದಿಕ್ಕು ತಪ್ಪಿಸುವ ಕೆಲಸ: ಸಚಿವ ವಿ. ಸೋಮಣ್ಣ ಆರೋಪ

Update: 2020-09-11 18:53 IST

ಹಾಸನ, ಸೆ.11: ಡ್ರಗ್ ಮಾಫಿಯಾದಲ್ಲಿ ಎಷ್ಟೆ ಪ್ರಭಾವಿಗಳು ಮತ್ತು ದೊಡ್ಡವರಾದರು ಇದ್ದರೂ ಶಿಕ್ಷೆ ಖಚಿತ. ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಆದರೆ ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹೇಳಿಕೆ ನೋಡಿದರೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ಬಗ್ಗೆ ಹಿಂದಿನ ಸರ್ಕಾರಗಳ ಅವಧಿಯಲ್ಲೂ ನಾವು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವಾಲಯವು ಯಾವುದೇ ಕಾರಣಕ್ಕೂ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರಲಿಲ್ಲ, ಅಷ್ಟೊಂದು ತೀಕ್ಷ್ಣವಾಗಿ ಈ ನಿರ್ಧಾರವನ್ನು ಇಂದು ತೆಗೆದುಕೊಂಡಿದ್ದೇವೆ. ಇದಕ್ಕೆ ತಾತ್ವಿಕ ಅಂತ್ಯ ಕಾಣಿಸಲು ಸಿಎಂ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಲಿದೆ ಎಂದು ತಿಳಿಸಿದರು.

ಬಿಜೆಪಿ ಸರಕಾರವು ಕೊರೋನ ಸಮಸ್ಯೆ ನಿರ್ವಹಿಸಲಾಗದೆ ಡ್ರಗ್ಸ್ ವಿಚಾರ ತಂದು ಜನರ ದಾರಿ ತಪ್ಪಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ನಲ್ಲೇ ನಾಲ್ಕೈದು ಗುಂಪುಗಳಿವೆ. ಅವರಿಗೆ ಮಾಡೋಕೆ ಈಗ ಕೆಲಸವಿಲ್ಲ. ಕಾಂಗ್ರೆಸ್ ನವರು ತೊಳಲಾಟದಲ್ಲಿದ್ದಾರೆ ಎಂದ ಅವರು, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನವರಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ನವರು ದಿಗ್ಭ್ರಾಂತರಾಗಿದ್ದಾರೆ. ಅವರು ಏನು ಕೆಲಸ ಮಾಡಬೇಕೆಂಬುದು ಅವರಿಗೆ ಗೊತ್ತಾಗುತ್ತಿಲ್ಲಾ ಎಂದು ಹೇಳಿದರು.

ಜನರು ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿರುವವರು ಕಾಂಗ್ರೆಸ್ ನವರೇ ವಿನಃ ನಾವಲ್ಲ. ಡ್ರಗ್ ಮಾಫಿಯಾದಲ್ಲಿ ಎಷ್ಟು ಪ್ರಭಾವಿಗಳು ಇದ್ದರೂ ಶಿಕ್ಷೆ ಖಚಿತ. ಎಷ್ಟು ದೊಡ್ಡವರಾದರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ ನವರ ಹೇಳಿಕೆ ನೋಡಿದರೇ ಅವರ ವಿಫಲತೆ ತೋರಿಸುತ್ತಿದೆ. ಕಾಂಗ್ರೆಸ್ ನಾಯಕರ ನಡುವೆ ಹಾಗೂ ಪಕ್ಷದಲ್ಲಿ ಸಾಮ್ಯತೆ ಕೊರತೆ ಇದೆ. ಕಾಂಗ್ರೆಸ್ ನವರ ಸಾಮ್ಯತೆ ಮರೆಮಾಚಲು ಬಿಜೆಪಿ ಸರಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಮೂರು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅವರು ಬಡವರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News