'ಹಿಂದಿ ಹೇರಿಕೆ' ಮೂಲಕ ಒಕ್ಕೂಟ ವ್ಯವಸ್ಥೆ ಶಿಥಿಲಗೊಳಿಸುವ ವ್ಯವಸ್ಥಿತ ಸಂಚು: ಕಾಂಗ್ರೆಸ್
Update: 2020-09-11 21:23 IST
ಬೆಂಗಳೂರು, ಸೆ.11: ಸರ್ವೋಚ್ಚ ನ್ಯಾಯಾಲಯದ ಆದೇಶ, ಸಂವಿಧಾನದ 8ನೇ ಪರಿಚ್ಛೇದದ ನಿಯಮಗಳು, ರಾಜ್ಯಗಳ ವಿರೋಧವನ್ನೂ ಮೀರಿ ಕೇಂದ್ರ ಬಿಜೆಪಿ ಸರಕಾರ ‘ಹಿಂದಿ ಭಾಷೆ’ ಹೇರಿಕೆ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ವ್ಯವಸ್ಥಿತ ಸಂಚು. ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಮೇಲಿನ ಕೇಂದ್ರದ ಸವಾರಿಯನ್ನು ಒಪ್ಪಲಾಗದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪರಿಸರ ಕರಡು ನೀತಿ ಸೇರಿದಂತೆ ಕೇಂದ್ರದ ಯಾವುದೇ ಆದೇಶವೂ ಸಾರ್ವಜನಿಕ ಆಕ್ಷೇಪಣೆಗಾಗಿ ಬಿಡುಗಡೆಯಾಗುವಾಗ ಪ್ರಾದೇಶಿಕ ಭಾಷೆಯಲ್ಲೂ ಇರುವುದು ಕಡ್ಡಾಯ. ಅದಕ್ಕಾಗಿಯೆ ಭಾಷಾಂತರ ಇಲಾಖೆಯಿದೆ. ಪ್ರಾದೇಶಿಕ ಭಾಷೆ, ಅಸ್ಮಿತೆ, ಸಂಸ್ಕೃತಿ ಎಲ್ಲವನ್ನೂ ಏಕರೂಪ ವ್ಯವಸ್ಥೆಯನ್ನು ಹೇರಿ ನಾಶಪಡಿಸುವ ಸಂಚು ಪ್ರಜಾಪ್ರಭುತ್ವ ವಿರೋಧಿ ಎಂದು ಕಾಂಗ್ರೆಸ್ ತಿಳಿಸಿದೆ.