ರಾಣಿ ಚೆನ್ನಮ್ಮ ವಿವಿ- ನಾಗರಿಕ ಪೊಲೀಸ್ ಹುದ್ದೆಗಳ ಪರೀಕ್ಷೆಗಳಿಗೆ ಒಂದೇ ದಿನಾಂಕ ನಿಗದಿ: ವಿದ್ಯಾರ್ಥಿಗಳಿಗೆ ಗೊಂದಲ

Update: 2020-09-11 16:46 GMT

ಬೆಳಗಾವಿ, ಸೆ.11: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆ ಹಾಗೂ ನಾಗರಿಕ ಪೊಲೀಸ್ ಹುದ್ದೆಗಳ ಪರೀಕ್ಷೆಗಳು ಸೆ.20 ರಂದೇ ನಿಗದಿಯಾಗಿರುವುದರಿಂದ ಎರಡೂ ಪರೀಕ್ಷೆಗಳಿಗೆ ಹಾಜರಾಗಬೇಕಾದಂತಹ ವಿದ್ಯಾರ್ಥಿಗಳಿಗೆ ಗೊಂದಲಕ್ಕೆ ಸಿಲುಕುವಂತಾಗಿದೆ.

ಎಪ್ರಿಲ್‍ನಲ್ಲಿ ವಿವಿ ಪರೀಕ್ಷೆಗಳು ನಡೆಯಬೇಕಿತ್ತು. ಕೋವಿಡ್ ಹಿನ್ನಲೆಯಲ್ಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ, ಯುಜಿಸಿ ಸೆ.30 ರೊಳಗೆ ಪರೀಕ್ಷೆಗಳನ್ನು ಮುಗಿಸುವಂತೆ ಆದೇಶಿಸಿದೆ. ಹೀಗಾಗಿ, ಎರಡು ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಒಂದು ಪರೀಕ್ಷೆಗೆ ಮಾತ್ರ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯದಲ್ಲಿ 45 ಸಾವಿರಕ್ಕೂ ಹೆಚ್ಚಿನ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಆಧಾರದ ಮೇಲೆ ಕಾನ್‍ಸ್ಟೆಬಲ್ ಹುದ್ದೆಗೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದು, ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳಿಗೆ ತೊಡಕಾಗಲಿದೆ.

ಮೇನಲ್ಲೇ ಪ್ರಕಟ: ಸಿವಿಲ್ ಪೊಲೀಸ್ (ಪುರುಷ ಮತ್ತು ಮಹಿಳೆ) ಹುದ್ದೆಗಳನ್ನು ಭರ್ತಿ ಮಾಡಲು ಮೇನಲ್ಲಿ ಕರ್ನಾಟಕ ಪೊಲೀಸ್ ರಿಕ್ರೂಟ್‍ಮೆಂಟ್ ವಿಭಾಗವು ಅಧಿಸೂಚನೆ ಹೊರಡಿಸಿತ್ತು. ಸೆ.20ಕ್ಕೆ (ರವಿವಾರ) ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ದಿನಾಂಕ ನಿಗದಿ ಮಾಡಲಾಗಿತ್ತು. ಆರ್‍ಸಿಯು ಪರೀಕ್ಷೆಯ ವೇಳಾಪಟ್ಟಿಯನ್ನು ಕಳೆದ ತಿಂಗಳು ಪ್ರಕಟಿಸಲಾಗಿದೆ. ಸೆ.26ರವರೆಗೆ ಪರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News