ಡ್ರಗ್ಸ್ ಮಾಫಿಯಾ ಬೇರು ಸಮೇತ ಕಿತ್ತುಹಾಕಲು ಸರಕಾರ ಬದ್ಧ: ಡಿಸಿಎಂ ಡಾ.ಅಶ್ವತ್ಥನಾರಾಯಣ

Update: 2020-09-11 18:55 GMT

ಮಂಡ್ಯ, ಸೆ.11: ರಾಜ್ಯದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತುಹಾಕಲು ನಮ್ಮ ಸರಕಾರ ಬದ್ದವಾಗಿದೆ. ಈ ಜಾಲದಲ್ಲಿ ಯಾರೇ ಇದ್ದರೂ ನಿರ್ದಾಕ್ಷೀಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾಯಣ ಹೇಳಿದ್ದಾರೆ.

ಮಳವಳ್ಳಿ ತಾಲೂಕಿನ ಸತ್ತೇಗಾಲ ಹಾಗೂ ನೆಟ್ಕಲ್ ಗ್ರಾಮದಲ್ಲಿ ಹಾದು ಹೋಗುತ್ತಿರುವ ಬೆಂಗಳೂರು, ರಾಮನಗರ ಜಿಲ್ಲೆಗೆ ಕಾವೇರಿ ನದಿಯಿಂದ ಕುಡಿಯುವ ನೀರಿನ ಯೋಜನೆಯ ಪೈಪ್‍ಲೈನ್ ಕಾಮಗಾರಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೇರೆ ಸರಕಾರಗಳ ಅವಧಿಯಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಣ ಮಾಡಲು ಯಾವುದೇ ಯತ್ನ ಮಾಡಲಿಲ್ಲ. ಹಾಗಾಗಿ ಅವರ ಟೀಕೆಗೆ ಒತ್ತುಕೊಡುವ ಅಗತ್ಯ ಇಲ್ಲ. ನಮ್ಮ ಸರಕಾರ ಮಾಫಿಯಾ ಮಟ್ಟಹಾಕಲು ದೃಢ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು.

ಕೋವಿಡ್ ನಿಯಂತ್ರಣವನ್ನು ರಾಜ್ಯ ಸರಕಾರ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಆಸ್ಪತ್ರೆಗಳಲ್ಲದೆ ಹಾಸ್ಟೆಲ್‍ಗಳಲ್ಲೂ ಕೋವಿಡ್ ಸೆಂಟರ್ ತೆರದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಸಮಸ್ಯೆಗಳು ಇರಬಹುದು. ಅವುಗಳನ್ನು ಸರಿಪಡಿಸಲಾಗುವುದು ಎಂದು ಅವರು ಹೇಳಿಕೊಂಡರು.

ವೈಯಕ್ತಿಕ ನೆಲೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರಬಹುದು. ಅದು ಅಷ್ಟು ಮುಖ್ಯವಲ್ಲ. ಆದರೆ, ನಮ್ಮ ಪಕ್ಷ ಶಿಸ್ತಿನ ಪಕ್ಷ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮಳವಳ್ಳಿಯಲ್ಲಿ ಬಿಜೆಪಿ ಬಾವಟ ಹಾರಿಸುತ್ತೇವೆ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕಾಗಿದ್ದು, ಆ ನಿಟ್ಟಿನಲ್ಲಿ ಪೈಪ್‍ಲೈನ್ ಹಾದು ಹೋಗಲಿರುವ ಎಲ್ಲಾ ಹಳ್ಳಿಗಳಿಗೆ ಕಾವೇರಿ ನದಿಯ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಇಂದು ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆದಷ್ಟು ಬೇಗ ಮುಕ್ತಾಯವಾಗಲಿದೆ ಎಂದು ಅವರು ಅಶ್ವತ್ಥನಾರಾಯಣ ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್, ಬಿಜೆಪಿಯ ಹಿರಿಯ ಮುಖಂಡರಾದ ಯಮದೂರು ಸಿದ್ದರಾಜು, ಅಶೋಕ್‍ಕುಮಾರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ  ದೇವರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗೇಗೌಡ, ಮಳವಳ್ಳಿ ಟೌನ್ ಅಧ್ಯಕ್ಷ ಮಹೇಶ್,  ರಾಜಣ್ಣ, ರಮೇಶ, ಶಿವಲಿಂಗಯ್ಯ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News