ಹೆಚ್‌ಡಿಕೆ ಜೊತೆ ಕೊಲಂಬೊಗೆ ಹೋಗಿದ್ದೆ ಎಂದ ಝಮೀರ್ ಅಹ್ಮದ್: ಕುಮಾರಸ್ವಾಮಿ ಪ್ರತಿಕ್ರಿಯೆ ಏನು ಗೊತ್ತಾ ?

Update: 2020-09-12 11:41 GMT

ಬೆಂಗಳೂರು, ಸೆ. 12: ನಾನು ಶ್ರೀಲಂಕಾದ ಕೊಲಂಬೊಗೆ ಹೋಗಿದ್ದು ಸತ್ಯ. ಕೇಂದ್ರ ಸರಕಾರ ಕೊಲಂಬೊ ಪ್ರವಾಸವನ್ನು ನಿಷೇಧಿಸಿಲ್ಲ. ಹೀಗಾಗಿ ಅದೇನು ಅಕ್ರಮ ಚಟುವಟಿಕೆಯಲ್ಲ. ಮಾದಕ ವಸ್ತುಗಳ ದಂಧೆಯಲ್ಲಿ ಪಾಲ್ಗೊಂಡಿದ್ದರೆ ನನ್ನನ್ನು ನೇಣಿಗೇರಿಸಲಿ ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಕೊಲಂಬೊಗೆ ಹೋಗಿದ್ದು ನಿಜ. ಆದರೆ, ಪ್ರಶಾಂತ್ ಸಂಬರಗಿ ಮಾಡುತ್ತಿರುವ ಆರೋಪದಂತೆ ನಟಿ ಸಂಜನಾ ಜತೆ ನಾನು ಹೋಗಿಲ್ಲ. ಅವರು ಮಾಡಿದ ಆರೋಪ ಸಾಬೀತಾದರೆ ನನ್ನ ಆಸ್ತಿ ಸರಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ ಎಂದು ಇದೇ ವೇಳೆ ತಿರುಗೇಟು ನೀಡಿದರು.

ಶ್ರೀಲಂಕಾದ ಕೊಲಂಬೊಗೆ ಎಲ್ಲರೂ ಹೋಗುತ್ತಾರೆ. ನಾನು ಪ್ರತಿವರ್ಷವೂ ಹೋಗುತ್ತೇನೆ. ಜೆಡಿಎಸ್ ಪಕ್ಷದಲ್ಲಿದ್ದಾಗಲೂ ಹೋಗಿದ್ದೆ. ಆಗ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಜತೆಯೂ ಕೊಲಂಬೊಗೆ ಹೋಗಿದ್ದೆ. 26 ಶಾಸಕರು ಕೊಲಂಬೊಗೆ ಹೋಗಿದ್ದೆವು. ಇನ್ನು ಕ್ಯಾಸಿನೋ ಕಾನೂನು ಬಾಹಿರವೇನೂ ಅಲ್ಲ. ಹಾಗಂತ ಕೇಂದ್ರ ಸರಕಾರ ಹೇಳಿದೆಯೇ? ಎಂದು ಝಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಮಾದಕ ವಸ್ತುಗಳ(ಡ್ರಗ್ಸ್) ಜಾಲದ ಜತೆ ನನಗೆ ಯಾವುದೇ ರೀತಿಯ ನಂಟು ಇಲ್ಲ. ನನಗೆ ಡ್ರಗ್ಸ್ ಮಾಫಿಯಾ ನಂಟಿದೆ ಎಂಬುದಾದರೆ ನನ್ನನ್ನು ಗಲ್ಲಿಗೇರಿಸಲಿ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಾಬೀತುಪಡಿಸಿದರೆ ನನ್ನನ್ನು ನೇಣಿಗೇರಿಸಿ ಎಂದು ನಾನೇ ನ್ಯಾಯಾಧೀಶರಿಗೆ ಬರೆದುಕೊಡುತ್ತೇನೆ. ಈ ಕೃತ್ಯದಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಇಂತಹ ಕೆಲಸದಲ್ಲಿದ್ದರೆ ಅವರಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಝಮೀರ್ ಅಹ್ಮದ್ ಖಾನ್ ಒತ್ತಾಯ ಮಾಡಿದರು.

ಕೊಲಂಬೊ ಯಾತ್ರೆ: ಝಮೀರ್ ಅಹ್ಮದ್ ಖಾನ್ ವಿರುದ್ಧ ಎಚ್‍ಡಿಕೆ ವಾಗ್ದಾಳಿ

'ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಶ್ರೀಲಂಕಾದ ಕೊಲಂಬೊಗೆ ಒಮ್ಮೆ ಪ್ರವಾಸ ಹೋಗಿದ್ದು ನಿಜ. ಆದರೆ, ಕದ್ದು ಮುಚ್ಚಿ 'ಕೊಲಂಬೊ ಯಾತ್ರೆ' ಮಾಡಿರಲಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೊ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಝಮೀರ್ ಅಹ್ಮದ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ.

'2014ರ ಜೂನ್ ತಿಂಗಳಲ್ಲಿ ಪಕ್ಷ ಸಂಘಟನೆಗೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಕೊಲಂಬೊಗೆ ಪ್ರವಾಸ ಹೋಗುವುದಾಗಿ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿ ಹೋಗಿದ್ದಲ್ಲದೇ, ಅಲ್ಲಿ ನಡೆದ ಶಾಸಕರ ಜೊತೆಗಿನ ಚರ್ಚೆಯ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆವು. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.

ನೆರೆಯ ರಾಜ್ಯ ಗೋವಾ ಇಲ್ಲವೇ ರಾಜ್ಯದ ರೆಸಾರ್ಟ್ ನಲ್ಲಿ ಸಭೆ ನಡೆಸುವುದಕ್ಕಿಂತ ಯಾವುದೇ ಅಡಚಣೆ ಇಲ್ಲದೆ ಶಾಸಕರೊಂದಿಗೆ ಮುಕ್ತವಾಗಿ ಚರ್ಚಿಸಲು ಕೊಲಂಬೊ ಪ್ರವಾಸ ದುಬಾರಿಯಲ್ಲ ಎಂಬ ಕಾರಣಕ್ಕೆ ಇಂತಹ ಸಭೆ ನಡೆಸಿದ್ದು ನಿಜ. ವಿಮಾನ ಹತ್ತುವಾಗಲೂ ಮತ್ತು ವಾಪಸು ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ. ಕೊಲಂಬೊ ಪ್ರಯಾಣ ಅದೇ ಮೊದಲು ಮತ್ತು ಕೊನೆ. ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ. ಅವರು ನಮ್ಮೊಂದಿಗೆ ಬಂದಿದ್ದರೆ ಹೊರತು ನಾವು ಅವರೊಂದಿಗೆ ಹೋಗಿರಲಿಲ್ಲ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ ಚಾಚಿ ಕೊಂಡಿರುವಂತ ನಾಲಿಗೆ, ಸತತವು ನುಡಿ ಕಂಡ್ಯ ನಾಲಿಗೆ, ಚಾಡಿ ಹೇಳಲು ಬೇಡ ನಾಲಿಗೆ'.. ಎಂದು ಪುರಂದರ ದಾಸರ ವಚನವನ್ನು ಉಲ್ಲೇಖಿಸಿ ಶಾಸಕ ಝಮೀರ್ ಅಹ್ಮದ್ ಖಾನ್ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News