ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

Update: 2020-09-12 11:44 GMT

ಹಾವೇರಿ, ಸೆ.12: ಜಮೀನು ಮಂಜೂರಾತಿ ಮಾಡಿಕೊಡಲು ಫಲಾನುಭವಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಪ್ರಥಮ ದರ್ಜೆ ಸಹಾಯಕ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾನೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಈ ಘಟನೆ ನಡೆದಿದ್ದು. ತಿಪ್ಪೇಸ್ವಾಮಿ ಎಂಬವರೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಪ್ರಥಮದರ್ಜೆ ಸಹಾಯಕ ಎಂದು ಗುರುತಿಸಲಾಗಿದೆ.

ಪರಿಶಿಷ್ಟ ಜಾತಿಯವರಿಗೆ ಸರಕಾರದಿಂದ ನೀಡುವ ಜಮೀನು ಮಂಜೂರಾತಿ ಮಾಡಲು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ, ಫೀಲ್ಡ್ ಆಫೀಸರ್ ದಾಮೋದರ ಹಾಗೂ ಕಚೇರಿಯ ಮತ್ತೋರ್ವ ಪ್ರಥಮದರ್ಜೆ ಸಹಾಯಕ ರಾಘವೇಂದ್ರ ಸೇರಿಕೊಂಡು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಪದ್ಮಾವತಿಪುರದ ಸಿದ್ದಪ್ಪ ಲಮಾಣಿ ಎಂಬ ಫಲಾನುಭವಿಗೆ ನಿಗಮದ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ನಾಲ್ವರು ಸೇರಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಆದರೆ 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಪ್ರಥಮದರ್ಜೆ ಸಹಾಯಕ ತಿಪ್ಪೇಸ್ವಾಮಿ ಮಾತ್ರ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಉಳಿದ ಮೂವರು ಎಸಿಬಿ ದಾಳಿಯ ವೇಳೆ ಕಚೇರಿಯಲ್ಲಿ ಇರಲಿಲ್ಲ. ಬಂಧಿತ ಓರ್ವ ಎಫ್‍ಡಿಎ ಸೇರಿ ನಾಲ್ವರ ವಿರುದ್ಧ ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News