ಸಿಎಂ ಮನೆಯ ವಾಚ್‍ಮ್ಯಾನ್ ಆಗದವರು ಆಸ್ತಿ ಬರೆದುಕೊಡುತ್ತಾರಾ ?: ಝಮೀರ್ ಹೇಳಿಕೆಗೆ ಸಿ.ಟಿ.ರವಿ ವ್ಯಂಗ್ಯ

Update: 2020-09-12 12:31 GMT

ಚಿಕ್ಕಮಗಳೂರು, ಸೆ.12 ಝಮೀರ್ ಅಹ್ಮದ್ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರ ಮಾತಲ್ಲಿ ಗಂಭೀರತೆ ಇದ್ದಿದ್ದರೆ ಅವರು ಈಗ ಸಿಎಂ ಮನೆ ಮುಂದೇ ವಾಚ್‍ಮ್ಯಾನ್ ಆಗಿರಬೇಕಿತ್ತು ಎಂದು ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. 

ಡ್ರಗ್ಸ್ ಪ್ರಕರಣ ಸಂಬಂಧದಲ್ಲಿ ತನ್ನ ವಿರುದ್ಧದ ಆರೋಪಗಳು ಸಾಬೀತಾದಲ್ಲಿ ಆಸ್ತಿಯನ್ನು ಸರಕಾರಕ್ಕೆ ಬರೆದು ಕೊಡುವುದಾಗಿ ಶಾಸಕ ಝಮೀರ್ ಹೇಳಿಕೆ ಸಂಬಂಧ ಶನಿವಾರ ಮಾಧ್ಯಮದವರ ಪ್ರಶ್ನೆಗಳಿಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆದಲ್ಲಿ ನಾನು ಅವರ ಮನೆಯ ವಾಚ್‍ಮ್ಯಾನ್ ಆಗಿರುತ್ತೇನೆ ಎಂದು ಝಮೀರ್ ಅಹ್ಮದ್ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದಲ್ಲದೇ ಯಡಿಯೂರಪ್ಪ ಸಿಎಂ ಕೂಡ ಆಗಿದ್ದಾರೆ. ಝಮೀರ್ ಹೇಳಿದಂತೆ ವಾಚ್‍ಮ್ಯಾನ್ ಆಗಿದ್ದಾರಾ? ವಾಚ್‍ಮ್ಯಾನ್ ಆಗದೇ ಇರುವರು ಆಸ್ತಿ ಬರೆದುಕೊಡುತ್ತಾರಾ? ಅವರ ಆಸ್ತಿ ಅಕ್ರಮವಾಗಿದ್ದರೆ ಸರಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅವರೇನು ಬರೆದುಕೊಡೋದು. ಅವರ ಹೇಳಿಕೆಯನ್ನು ಜನರೇ ಗಂಭೀರವಾಗಿ ತೆಗೆದುಕೊಂಡಿಲ್ಲ. ಇನ್ನು ಸರಕಾರ ಗಂಭೀರವಾಗಿ ಪರಿಗಣಿಸಲು ಸಾಧ್ಯವೇ ಎಂದರು.  

ಡ್ರಗ್ಸ್ ಮಾಫಿಯಾ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಸರಕಾರ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲು ಡ್ರಗ್ಸ್ ಮಾಫಿಯಾದ ಬಗ್ಗೆ ಯಾರಲ್ಲಾದರೂ ಸರಿ ಮಾಹಿತಿ ಇದ್ದರೆ ಪೊಲೀಸರಿಗೆ ಕೊಡಿ. ಮುಂಚೆ ಮಾಹಿತಿ ನೀಡಿದರೆ ಎಲ್ಲಿ ಮುಚ್ಚಿ ಹಾಕುತ್ತಾರೋ ಎಂಬ ಭಯವಿತ್ತು. ಆದ್ದರಿಂದ ಮಾಹಿತಿ ನೀಡುತ್ತಿರಲಿಲ್ಲ, ಪ್ರಶಾಂತ್ ಸಂಬರಗಿ ಮಾತ್ರವಲ್ಲ, ಡ್ರಗ್ಸ್ ಮಾಫಿಯಾದ ಬಗ್ಗೆ ಯಾರಿಗೆ ಮಾಹಿತಿ ಇದೆಯೋ ಅವರೆಲ್ಲರೂ ಮುಂದೆ ಬಂದು ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಭದ್ರತೆ ನೀಡಲಾಗುವುದು. ಮಾಹಿತಿ ನೀಡುವುದರಿಂದ ತನಿಖೆಗೆ ಸಹಕಾರ ಸಿಗುವುದಲ್ಲದೇ ಡ್ರಗ್ಸ್ ಮಾಫಿಯಾದ ವಿರುದ್ಧ ಹೋರಾಡಲು ಸಾಧ್ಯವಾಗಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಮಾಹಿತಿ ಇದೆ ಎಂದಿದ್ದಾರೆ. ಅವರು ತನಿಖಾ ತಂಡಕ್ಕೆ ಮಾಹಿತಿ ನೀಡಲಿ. ಆಗ ಮಾತ್ರ ಡ್ರಗ್ಸ್ ಜಾಲವನ್ನು ಬಗ್ಗು ಬಡಿಯಲು ಸಾಧ್ಯ. ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ತನಿಖೆ ಗಂಭೀರವಾಗಿ ನಡೆಯುತ್ತದೆ ಎಂದರು.

ಸದ್ಯದ ಡ್ರಗ್ಸ್ ಪ್ರಕರಣದಲ್ಲಿ ಲವ್ ಜಿಹಾದ್, ಭಯೋತ್ಪಾದನೆಯ ನಂಟು ಹೀಗೆ ಹಲವು ಆಯಾಮಗಳ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ತನಿಖಾ ತಂಡ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತದೆ. ಪ್ರಮೋದ್ ಮುತಾಲಿಕ್, ಶೋಭಾ ಕರಂದ್ಲಾಜೆ ಹೇಳಿಕೆಗಳ ಆಯಾಮದಲ್ಲೂ ತನಿಖೆ ನಡೆಯುತ್ತದೆ. ಮುಂದಿನ ದಿನಗಳಲ್ಲಿ ತನಿಖೆಯು ಹೊಸ ಮಜಲುಗಳು ತೆರೆದುಕೊಳ್ಳಬಹುದು ಎಂದ ಅವರು, ಈ ಮಾಫಿಯಾದಲ್ಲಿ ಹವಾಲ ಹಣದ ಹರಿವು ಇರುವ ಬಗ್ಗೆಯೂ ಸಂಶಯವಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News