ಗಾಂಜಾ ವಿಚಾರದಲ್ಲಿ ಇಡೀ ರೈತ ಸಮುದಾಯವನ್ನು ದೂಷಿಸುವುದು ಸಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-09-12 13:33 GMT

ಹಾವೇರಿ, ಸೆ. 12: ಯಾರೋ ಒಬ್ಬರು ತಮ್ಮ ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದ ಮಾತ್ರಕ್ಕೆ ಅನ್ನಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ರೈತರು ನಾಡಿನ ಅನ್ನದಾತರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರ ನಟರಾಗಲೀ, ನಟಿಯರಾಗಲೀ ಯಾರೂ ತಪ್ಪು ಮಾಡಿದರೂ ಅದು ತಪ್ಪೇ. ಡ್ರಗ್ಸ್ ದಂಧೆ ತನಿಖೆ ನಡೆಯುತ್ತಿದೆ. ಅಪರಾಧಿಗಳಾರು ಎಂಬುದು ತನಿಖೆಯಿಂದ ಪತ್ತೆಯಾಗಲಿದೆ. ಈ ಹಿಂದೆ ತಮ್ಮ ಅವಧಿಯಲ್ಲಿನ ಚಿತ್ರರಂಗದಲ್ಲಿ ಪರಿಶುದ್ಧ ವಾತಾವರಣವಿತ್ತು. ಶೂಟಿಂಗ್ ವೇಳೆಯಲ್ಲಿ ಸಣ್ಣ ತಪ್ಪಾದರೂ ಪಶ್ಚಾತ್ತಾಪ ಪಡುವಂತಹ ವಾತಾವರಣವಿತ್ತು. ಈಗ ಚಿತ್ರರಂಗದಲ್ಲಿ ಡ್ರಗ್ ವಿಚಾರ ಕೇಳಿಬಂದಿರುವುದು ಬೇಸರದ ಸಂಗತಿ. ಈ ಹಾವಳಿ ಎಲ್ಲ ರಂಗದಲ್ಲಿಯೂ ಇದೆ. ಚಿತ್ರರಂಗದಲ್ಲಾಗಿರುವುದು ಬಹಳ ಬೇಗ ಎದ್ದು ಕಾಣುತ್ತದೆ ಎಂದು ಹೇಳಿದರು.

ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಪ್ರಾಯೋಗಿಕ ಹಂತದಲ್ಲಿಯೇ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ವಿಚಾರ. 2017ರಲ್ಲಿ ಬೆಳೆ ಸಮೀಕ್ಷೆ ಮಾಡಿದಾಗ ಸುಮಾರು 3 ಸಾವಿರ ರೈತರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆದರೀಗ ಆ್ಯಪ್ ಬೆಳೆ ಸಮೀಕ್ಷೆಯಲ್ಲಿ ಸೆ.11ರ ಸಂಜೆವರೆಗೆ ಒಟ್ಟು 76 ಲಕ್ಷ ತಾಕುಗಳು ಸಮೀಕ್ಷೆಯಾಗಿರುವುದು ಹೆಮ್ಮೆಯ ವಿಚಾರ. ರೈತರು ಬಹಳ ಆಸಕ್ತಿಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ರೈತರು ಸರಕಾರದ ಸೌಲಭ್ಯಗಳನ್ನು ಪಡೆಯಲು ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸುವುದು ಅತ್ಯವಶ್ಯಕ. ರಾಜ್ಯದ ಕೆಲವೆಡೆ ಇಂಟರ್‍ನೆಟ್ ಸಮಸ್ಯೆಯಿಂದಾಗಿ ಬೆಳೆ ಸಮೀಕ್ಷೆ ವಿಳಂಬವಾಗಿದೆ. ಈಗ ಖಾಸಗಿ ನಿವಾಸಿಗಳ ಮೂಲಕವೂ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಎಲ್ಲ ರೈತರು ಆ್ಯಪ್ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಉದ್ದೇಶಿತ ಯೋಜನೆ ಯಶಸ್ವಿಗೊಳಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News