ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗತವೈಭವವನ್ನು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ: ನೂತನ ಉಸ್ತುವಾರಿ ಎಚ್.ಕೆ.ಪಾಟೀಲ್

Update: 2020-09-12 14:33 GMT

ಬೆಂಗಳೂರು, ಸೆ.12: ಮಹಾರಾಷ್ಟ್ರ ಬಹುದೊಡ್ಡ ರಾಜ್ಯವಷ್ಟೇ ಅಲ್ಲ, ರಾಜಕೀಯವಾಗಿಯೂ ದೇಶದಲ್ಲೆ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಸಾಕಷ್ಟು ಸವಾಲುಗಳಿವೆ, ಅಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಸ್ಥಾಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್‍ನ ನೂತನ ಉಸ್ತುವಾರಿ ಎಚ್.ಕೆ.ಪಾಟೀಲ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತನಗೆ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರದ ಉಸ್ತುವಾರಿಯಂತಹ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸೋನಿಯಾಗಾಂಧಿ, ರಾಹುಲ್ ಗಾಂಧಿಯವರ ಮಾರ್ಗದರ್ಶನ ನನಗೆ ಇರುತ್ತದೆ. ಜೊತೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಮಹಾರಾಷ್ಟ್ರದ ಉಸ್ತುವಾರಿಯಾಗಿದ್ದರು. ಅದರ ಪ್ರಯೋಜನ ಹಾಗೂ ಅವರ ಮಾರ್ಗದರ್ಶನ ನನಗೆ ಸಿಗಲಿದೆ ಎಂದು ಅವರು ತಿಳಿಸಿದರು.

ಈ ಬಾರಿ ನಮ್ಮ ರಾಜ್ಯದ ಐವರು ಪ್ರಮುಖರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿದೆ. ನಾನು ವಿದ್ಯಾರ್ಥಿ ದೆಸೆಯಲ್ಲೆ ಕಾಂಗ್ರೆಸ್‍ಗೆ ಬಂದವನು. ವೀರಪ್ಪ ಮೊಯ್ಲಿ ಮೊದಲು ನನ್ನನ್ನು ಮಂತ್ರಿ ಮಾಡಿದರು. ಎಸ್.ಎಂ.ಕೃಷ್ಣ ಸರಕಾರದಲ್ಲಿ ಜಲಸಂಪನ್ಮೂಲ ಸಚಿವ, ಧರಂಸಿಂಗ್ ಸರಕಾರದಲ್ಲಿ ಕಾನೂನು ಸಚಿವ, ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೆ. ಈಗ ಹೊಸ ಜವಾಬ್ದಾರಿ ಸಿಕ್ಕಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಡ್ರಗ್ ಮಾಫಿಯಾ ಅಧಿವೇಶನದಲ್ಲಿ ಚರ್ಚೆ: ಡ್ರಗ್ ಮಾಫಿಯಾದಲ್ಲಿ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಝಮೀರ್ ಅಹ್ಮದ್ ಖಾನ್ ತಮ್ಮ ವಿರುದ್ಧದ ಆರೋಪ ಸಾಬೀತಾದರೆ ತಮ್ಮ ಪೂರ್ತಿ ಆಸ್ತಿಯನ್ನೆ ಸರಕಾರಕ್ಕೆ ಬರೆದು ಕೊಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿನ ಡ್ರಗ್ ಮಾಫಿಯಾ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.

ಬಿಐಇಸಿ ಮುಚ್ಚುವ ಪ್ರಯತ್ನ: ಬೆಂಗಳೂರು ಅಂತರ್‍ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರವನ್ನು ಮುಚ್ಚುವ ಪ್ರಯತ್ನ ಸರಕಾರ ಮಾಡುತ್ತಿದೆ. ಈ ಬಗ್ಗೆ ನಾನೇ ಮೊದಲ ದೂರುದಾರನಾಗಿದ್ದೇನೆ. ಮಾನವ ಹಕ್ಕುಗಳ ಆಯೋಗದ ಗಮನವನ್ನು ಈ ಬಗ್ಗೆ ಸೆಳೆದಿದ್ದೇನೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ರಾಜ್ಯದಲ್ಲಿ ಕೋವಿಡ್‍ನಿಂದ ಸಾವುಗಳು ಸಂಭವಿಸುತ್ತಿರುವ ಬಗ್ಗೆ ಸರಕಾರ ಸಮಗ್ರ ಮಾಹಿತಿ ನೀಡಬೇಕು. ಸರಕಾರ ಚುರುಕಾಗಿ ಕೆಲಸ ಮಾಡಬೇಕು. ರಾಷ್ಟ್ರೀಯಮಟ್ಟದಲ್ಲಿನ ಸರಾಸರಿಗಿಂತ ರಾಜ್ಯದಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಆದರೆ, ಸರಕಾರದ ಅಂಕಿ ಸಂಖ್ಯೆಗಳ ಅಧ್ಯಯನ ಕುತೂಹಲ ಮೂಡಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News