ಆನ್‌ಲೈನ್ ಶಾಪಿಂಗ್ ಕೂಪನ್ ನಂಬಿ 1.73 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ಮಹಿಳೆ !
ಶಿವಮೊಗ್ಗ, ಸೆ.12: ಕಂಪೆನಿಯೊಂದರ ಹೆಸರಲ್ಲಿ ಬಂದ ಆನ್‌ಲೈನ್ ಶಾಪಿಂಗ್ ಕೂಪನ್ ನಲ್ಲಿ ನೀವು 12 ಲಕ್ಷ ರೂ. ಹಣ ಗೆದ್ದಿದ್ದೀರಿ ಎಂಬ ಸಂದೇಶವನ್ನು ನಂಬಿದ ಮಹಿಳೆಯೊಬ್ಬರು 1.73 ಲಕ್ಷ ರೂ. ವಂಚನೆಗೆ ಒಳಗಾದ ಘಟನೆ ನಡೆದಿದೆ.
ಸೆ.4 ರಂದು ನವುಲೆಯ ವೀರಭದ್ರೇಶ್ವರ ಲೇಔಟ್ ನ ಮಹಿಳೆಯೊಬ್ಬರು ಕೊಲ್ಕತ್ತಾದ ವಿಳಾಸವುಳ್ಳ ಆನ್‌ಲೈನ್ ಶಾಪಿಂಗ್ ಕಂಪೆನಿಯೊಂದರ ಹೆಸರಿನಲ್ಲಿ '12 ಲಕ್ಷ ರೂ. ಹಣ ಗೆದ್ದಿದ್ದೀರಿ' ಎಂಬ ಕೂಪನ್ ಮತ್ತು ಪತ್ರವೊಂದನ್ನು ಕೊರಿಯರ್ ಮೂಲಕ ಪಡೆದಿದ್ದಾರೆ. ಆ ಪತ್ರ ಮತ್ತು ಕೂಪನ್ ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ''ನಿಮ್ಮ ಹುಟ್ಟುಹಬ್ಬಕ್ಕೆ 12 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ. ನಿಮ್ಮ ಮೊಬೈಲ್ ಸಂಖ್ಯೆಯಿಂದ ಈ ಬಹುಮಾನ ಬಂದಿದೆ. ಬಹುಮಾನದ ಹಣವನ್ನು ಹಾಕುತ್ತೇವೆ. ಪತ್ರದಲ್ಲಿರುವ ಮಾಹಿತಿಯನ್ನ ಭರ್ತಿ ಮಾಡಿ ವಾಟ್ಸ್ ಆ್ಯಪ್ ಮಾಡಿ'' ಎಂದು ಒಂದು ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ.
ಈ ಹಣ ನಿಮ್ಮ ಕೈ ಸೇರಬೇಕಿದ್ದರೆ ರಾಜ್ಯ ಸರಕಾರ, ಕೇಂದ್ರ ಸರಕಾರದ ಟ್ಯಾಕ್ಸ್ ತುಂಬಿ ಎನ್ಒಸಿ ಪಡೆಯಬೇಕಾಗಿದೆ. ಅದಕ್ಕೆ ತಗಲುವ ಶುಲ್ಕದ ಹಣವನ್ನು ಎಸ್ ಬಿಐ ಬ್ಯಾಂಕ್ ಖಾತೆಯ ರೀಟಾ ರಾಯ್ ಬ್ಯಾಂಕ್ ಖಾತೆಗೆ ಹಣ ತುಂಬಿಸಲು ಅವರು ಸೂಚಿಸಿದ್ದಾರೆ. ಅದರಂತೆ ಮೊದಲಿಗೆ ಚೆಕ್ ಮೂಲಕ 24 ಸಾವಿರ ರೂ. ಹಣ, ಎರಡನೇ ಹಂತದಲ್ಲಿ 50 ಸಾವಿರ ರೂ. ಹಾಗೂ ಮೂರನೇ ಹಂತದಲ್ಲಿ 1 ಲಕ್ಷದಷ್ಟು ಹಣವನ್ನು ಚೆಕ್ ಮೂಲಕ ಹಾಕಿದ್ದು, ಒಟ್ಟಾರೆ ಮಹಿಳೆ ಸುಮಾರು 1 ಲಕ್ಷದ 73 ಸಾವಿರದ 400 ರೂ. ಗಳನ್ನ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.