ಸದ್ಯಕ್ಕಿಲ್ಲ ಸಪ್ತಪದಿ!: ರಾಜ್ಯ ಸರಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೊರೋನ ಕಂಟಕ

Update: 2020-09-12 17:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.12: ಸರಕಾರದ 'ಸಪ್ತಪದಿ' ಸಾಮೂಹಿಕ ವಿವಾಹ ನಡೆಯುವುದು ಈ ವರ್ಷ ಬಹುತೇಕ ಅನುಮಾನದಂತಿದ್ದು, ಕೊರೋನ ಸೋಂಕು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡುವ ಸಂಬಂಧ ಚಿಂತನೆ ನಡೆಸಲಾಗುತ್ತಿದೆ.

ಸರಕಾರ ಮದುವೆ ಮಾಡಿಸುತ್ತದೆ ಎಂದು ಹೆಸರು ನೋಂದಾಯಿಸಿದ್ದ ನೂರಾರು ಬಡ ಕುಟುಂಬದ ಜೋಡಿಗಳೆಲ್ಲಾ ಕಾದು ಕಾದು ಬೇಸತ್ತು ಇದೀಗ ತಮ್ಮದೇ ಖರ್ಚಿನಲ್ಲೇ ಮದುವೆ ಆಗುತ್ತಿದ್ದಾರೆ. ಮದುವೆಗೆಂದು ಸುಮಾರು 1,500 ಜೋಡಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ ಶೇ.60 ರಷ್ಟು ಜೋಡಿಗಳು ಈಗಾಗಲೇ ಮದುವೆ ಆಗಿದ್ದಾರೆ. ಉಳಿಕೆ ಜೋಡಿಗಳಿಗಾದರೂ ಮದುವೆ ಮಾಡೋಣವೆಂದು ಜುಲೈ-ಆಗಸ್ಟ್ ನಲ್ಲಿ ದಿನಾಂಕಗಳನ್ನು ನಿಗದಿ ಮಾಡಿತ್ತು. ಈಗ ಆ ದಿನಾಂಕಗಳಲ್ಲೂ ಮದುವೆ ನಡೆಸಲು ಕೊರೋನ ಅಡ್ಡಿಯಾಗಿದೆ.

ಕಳೆದ ವರ್ಷ ಸರಕಾರ (2019ನೇ ಸಾಲಿನಲ್ಲಿ) ಸಪ್ತಪದಿ ಯೋಜನೆಯನ್ನು ಪ್ರಕಟಿಸಿತು. ಅದರಂತೆ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು 8 ಗ್ರಾಂ.ತೂಕ) ಹಾಗೂ ವಧು-ವರರಿಗೆ ಬಟ್ಟೆ ಖರೀದಿ ಇತ್ಯಾದಿಗಳಿಗಾಗಿ ಪ್ರತಿ ಜೋಡಿಗೆ 55 ಸಾವಿರ ರೂ. ಖರ್ಚು ಮಾಡುತ್ತವೆ. 15 ಕೋಟಿ ವೆಚ್ಚದಲ್ಲಿ ಎರಡು ಸಾವಿರ ಜೋಡಿಗಳಿಗೆ ಮದುವೆ ಮಾಡಿಸುವುದಾಗಿ ಹೇಳಿತ್ತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ರಥಯಾತ್ರೆ ಮತ್ತಿತರ ಕಾರ್ಯಕ್ರಮಗಳಿಗಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿತ್ತು.

ಆದರೆ ಎಲ್ಲವೂ ನಿಗದಿಯಂತೆ (ಎ.26 ಮತ್ತು ಮೇ 25) ನಡೆದಿದ್ದರೆ ಈ ವೇಳೆಗಾಗಲೇ ಎರಡು ಹಂತದಲ್ಲಿ ಸರಳ ಸಾಮೂಹಿಕ ವಿವಾಹಗಳು ಮುಗಿದಿರುತ್ತಿದ್ದವು. ಆದರೆ ಕೊರೋನದಿಂದ ಅದು ಸಾಧ್ಯವಾಗಲಿಲ್ಲ. ನಂತರ ಜು.23 ರಿಂದ ಆ.17ರವರೆಗೆ ನಾನಾ ಹಂತಗಳಲ್ಲಿ ಮದುವೆ ನಡೆಸಲು ದಿನಾಂಕ ನಿಗದಿ ಮಾಡಲಾಯಿತು. ಇದೀಗ ಈ ದಿನಾಂಕವೂ ಮುರಿದುಬಿದ್ದಿದೆ.

ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಸಾಮೂಹಿಕ ವಿವಾಹ ನಿಗದಿಪಡಿಸಿರುವುದು. ಹೇಗಿದ್ದರೂ ಸಾಮೂಹಿಕ ವಿವಾಹಕ್ಕೆಂದು ಸರಕಾರ ಹಣ ನಿಗದಿಪಡಿಸಿದೆ. ಇದನ್ನು ನೋಂದಾಯಿತ ಫಲಾನುಭವಿಗಳಿಗೆ ಕೊಟ್ಟರೆ ಅದರ ಆಶಯ ಈಡೇರುತ್ತದೆ ಎಂಬುದು ಹಲವರ ಒತ್ತಾಸೆಯಾಗಿದೆ.

ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ವಧು-ವರನಿಗೆ ಉಡುಗೆ, ವಧುವಿಗೆ ಬಂಗಾರದ ಉಡುಗೊರೆ (ಮಾಂಗಲ್ಯ, ಬಂಗಾರದ ಗುಂಡುಗಳು) ನೀಡುವ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಸರಳ ವಿವಾಹದ ಆಶಯ ಬಿತ್ತುವುದು ನಮ್ಮ ಸಾಮೂಹಿಕ ವಿವಾಹದ ಉದ್ದೇಶ. ಆದರೆ ಕೊರೋನದಿಂದ ಅದಕ್ಕೆ ಅಡ್ಡಿಯಾಗಿದೆ.

ಕೊರೋನದ ಆರ್ಭಟ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ಈ ವರ್ಷ ಸಾಮೂಹಿಕ ವಿವಾಹ ನಡೆಸುವುದು ಕಷ್ಟಕರವಾಗಿದೆ. ಈ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಧು-ವರರಿಗೆ ಈ ಯೋಜನೆಯಡಿ ಹಣ ಕೊಡಲು ಬರುವುದಿಲ್ಲ. ಬಂಗಾರ ಕೊಡಲು ದೇವಾಲಯಗಳಲ್ಲಿ ಸಂಗ್ರಹವಾಗಿರುವ ಚಿನ್ನಕ್ಕೆ ಟೆಂಡರ್ ಕರೆದು ಕರೆಯುವುದು ಸೇರಿದಂತೆ ಕೆಲವು ನಿಯಮಗಳಿವೆ. ಹೀಗಾಗಿ ಪರಿಹಾರ ಕೊಡಲು ಬರುವುದಿಲ್ಲ.

-ರೋಹಿಣಿ ಸಿಂಧೂರಿ, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News