ನನ್ನ ಮಾತೃ ಭಾಷೆ ಕನ್ನಡ, ಹಿಂದಿ ಹೇರಿಕೆ ಬೇಡ: ಬಹುಭಾಷಾ ನಟ ಪ್ರಕಾಶ್ ರಾಜ್

Update: 2020-09-13 14:49 GMT
Photo: Twitter

ಬೆಂಗಳೂರು, ಸೆ. 13: ಕೇಂದ್ರ ಸರಕಾರದ `ಹಿಂದಿ ದಿವಸ್' ಆಚರಣೆ ಮತ್ತು ಹಿಂದಿ ಹೇರಿಕೆಯ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಹೋರಾಟ ಆರಂಭ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ಮತ್ತು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್ ಅವರು, `ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ. ನನ್ನ ಗ್ರಹಿಕೆ. ನನ್ನ ಬೇರು. ನನ್ನ ಶಕ್ತಿ. ನನ್ನ ಹೆಮ್ಮೆ. ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡ' ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, `ನಂಗೆ ಹಿಂದಿ ಬರಲ್ಲ, ಹೋಗ್ರಪ್ಪ' ಎಂದು ಬರೆದಿರೋ ಟಿ ಶರ್ಟ್ ವೊಂದನ್ನು ಧರಿಸಿದ್ದು, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಸಾಕಷ್ಟು ನಟ-ನಟಿಯರಿಂದಲೂ ಹಿಂದೆ ಹೇರಿಕೆಯ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಸದ್ಯ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಪ್ರಚಾರ ನಡೆಯುತ್ತಿದೆ.

ಪ್ರಕಾಶ್ ರಾಜ್ ಟ್ವೀಟ್ ವಿರುದ್ಧ ಆಕ್ರೋಶ ಹೊರಹಾಕಿರುವ ಕುಬೇರಪ್ಪ ಪಿ.ಎಚ್. ಎಂಬವರು, 'ಹಿಂದಿ ಹೇರಿಕೆ ಬೇಡ ಅಂತೀಯ, ನಿನ್ನ ಪ್ರೊಫೈಲ್ ಫೋಟೋನಲ್ಲೇ ಹಿಂದಿ ರಾರಾಜಿಸುತ್ತಿದೆ. ನಿಂದನ್ನು ಮೊದಲು ಸರಿಯಾಗಿ ತೊಳಕೊಳಪ್ಪ. ಆಮೇಲೆ ಬೇರೆಯವರಿಗೆ ಹೇಳುವಂತೆ' ಎಂದು ಪ್ರತಿಕ್ರಿಯಿಸಿದ್ದಾರೆ.

'ಐ ಲವ್ ಯೂ ಪ್ರಕಾಶ್ ಸರ್ ನಿಮ್ಮ ಕನ್ನಡದ ಅಭಿಮಾನಕ್ಕೆ ನನ್ನ ಅಭಿನಂದನೆಗಳು. ನಾಗಮಂಡಲದಲ್ಲಿ ಆಹಾ ಎಂಥ ಅಭಿನಯ. ನನ್ನ ನಿಜವಾದ ನಟ ಅಪ್ಪಾಜಿ ಅವರ ಸಾಲಿನಲ್ಲಿ ನೀವು ಒಬ್ಬರು. ನಿಮ್ಮ ಮೇಲೆ ನಿಜವಾದ ಭಾರತೀಯರ ಮತ್ತು ನಿಜವಾದ ಕನ್ನಡಿಗರ ಪ್ರೀತಿ ಯಾವತ್ತೂ ಸದಾಕಾಲ ನಿಮ್ಮ ಜೊತೆಯಲ್ಲಿಯೇ ಇದ್ದು ನಿಮ್ಮ ಈ ಯಶಸ್ಸಿಗೆ ಕೈಜೋಡಿಸುತ್ತಾರೆ, ವಂದನೆಗಳು' ಎಂದು ಪ್ರದೀಪ್ ಇ.ವಿ. ಎಂಬವರು ಪ್ರಕಾಶ್ ರಾಜ್ ಅವರ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News