ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದ್ದರೆ ಅಧಿವೇಶನ 15 ದಿನ ವಿಸ್ತರಿಸಲಿ: ಸಿದ್ದರಾಮಯ್ಯ

Update: 2020-09-13 15:59 GMT

ಬೆಂಗಳೂರು, ಸೆ.13: ಬಿಜೆಪಿ ನೇತೃತ್ವದ ರಾಜ್ಯ ಸರಕಾರಕ್ಕೆ ವಿಧಾನ ಮಂಡಲ ಅಧಿವೇಶನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಂಬಿಕೆಯಿಂದ್ದರೆ ಸೆ.21ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶದ ಕಾಲಾವಧಿಯನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಬೇಕೆಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ರವಿವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಮಾತನಾಡಿದ ಅವರು, ಸೆ.21ರಿಂದ ಆರಂಭವಾಗುವ ಅಧಿವೇಶನವು ಕೇವಲ 8 ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ವೇಳೆ ರಾಜ್ಯದ ಜನತೆಯ ಬದುಕನ್ನು ನಿರ್ಣಯಿಸುವಂತಹ 31 ವಿಧೇಯಕಗಳು ಮಂಡನೆಯಾಗಲಿದೆ. ಪ್ರತಿ ವಿಧೇಯಕದ ಬಗ್ಗೆ ಕನಿಷ್ಠ ಎರಡು ಗಂಟೆಯಾದರು ಚರ್ಚೆಯಾಗಬೇಕಿದೆ. ಹೀಗಾಗಿ ಅಧಿವೇಶನವನ್ನು 15 ದಿನಗಳ ವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಸುಗ್ರಿವಾಜ್ಞೆಯ ಮೂಲಕ ಹಲವು ಮಹತ್ವದ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಬಿಜೆಪಿ ಸರಕಾರ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಂಬಿಕೆಯೇ ಇಲ್ಲವಾಗಿದೆ. ಸದನದಲ್ಲಿ ಬಹುಮತ ಇದ್ದ ಮಾತ್ರಕ್ಕೆ ಯಾವುದೇ ಕಾಯ್ದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸುವ ಪರಿಪಾಟ ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲವೆಂದು ಅವರು ಹೇಳಿದರು.

ನಿಯಮಗಳ ಪ್ರಕಾರ ವರ್ಷಕ್ಕೆ ಕನಿಷ್ಠ 60 ದಿನಗಳು ಅಧಿವೇಶ ನಡೆಸಬೇಕು. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ 35 ರಿಂದ 40 ದಿನಗಳ ವರೆಗೆ ನಡೆಸಿದ್ದೇನೆ. ಆದರೆ, ಬಿಜೆಪಿ ಸರಕಾರ ಈ ದಿನಗಳನ್ನು ಹೆಚ್ಚಿಸುವ ಬದಲು ಇಳಿಸುತ್ತಾ ಸಾಗಿದೆ. ಹೀಗಾಗಿ ಅಧಿವೇಶವನ್ನು ವಿಸ್ತರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದೇನೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News