ಕೆ.ಎಲ್.ಅಶೋಕ್‍ರಿಗೆ ಅವಮಾನ ಆರೋಪ ಪ್ರಕರಣ: ಸೆ.14ರ 'ಕೊಪ್ಪ ಚಲೋ' ರದ್ದು

Update: 2020-09-13 16:13 GMT

ಚಿಕ್ಕಮಗಳೂರು, ಸೆ.13: ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಹೋರಾಟಗಾರ, ಚಿಂತಕ, ಪತ್ರಕರ್ತ ಕೆ.ಎಲ್.ಅಶೋಕ್ ಅವರನ್ನು ಪೊಲೀಸರು ನಡುರಸ್ತೆಯಲ್ಲಿ ಅವಮಾನಿಸಿದ್ದಾರೆನ್ನಲಾದ ಪ್ರಕರಣ ಸಂಬಂಧ ಪೊಲೀಸರ ಅಮಾನತಿಗೆ ಆಗ್ರಹಿಸಿ ಅಶೋಕ್ ಅಭಿಮಾನಿಗಳ ಬಳಗದ ವತಿಯಿಂದ ಸೆ.14ರಂದು ನಡೆಯಬೇಕಿದ್ದ ಕೊಪ್ಪ ಚಲೋ ಚಳವಳಿ ರದ್ದಾಗಿದ್ದು, ಅಶೋಕ್ ಅವರನ್ನು ನಡುರಸ್ತೆಯಲ್ಲಿ ಅವಮಾನಿಸಿದ ಪೇದೆಯನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಚಳವಳಿಯನ್ನು ರದ್ದು ಮಾಡಲಾಗಿದೆ ಎಂದು ಸಂವಿಧಾನ ಉಳಿಸಿ ಹೋರಾಟ ಸಮಿತಿಯ ಗೌಸ್ ಮೊಹಿದ್ದೀನ್ ತಿಳಿಸಿದ್ದಾರೆ.

ಇತ್ತೀಚೆಗೆ ಕೆ.ಎಲ್.ಅಶೋಕ್ ತಮ್ಮ ಪತ್ನಿ, ಮಗಳು, ಅತ್ತೆಯೊಂದಿಗೆ ಖಾಸಗಿ ಕೆಲಸದ ನಿಮಿತ್ತ ಕೊಪ್ಪ ಪಟ್ಟಣಕ್ಕೆ ಕಾರಿನಲ್ಲಿ ಆಗಮಿಸಿದ್ದರು. ಈ ವೇಳೆ ಪಾರ್ಕಿಂಗ್ ವಿಚಾರದಲ್ಲಿ ಪೊಲೀಸ್ ಪೇದೆ ಅಶೋಕ್ ಅವರ ಕುಟುಂಬಸ್ಥರ ಮುಂದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಶಾಸಕ ರಾಜೇಗೌಡ ಅವರ ಪರಿಚಯಸ್ಥ ಎಂದರೂ ಬಿಡದೇ ಶಾಸಕರನ್ನೂ ನಿಂದಿಸಿದ್ದು, ನಂತರ ಠಾಣಾಧಿಕಾರಿ ರವಿ, ಅಶೋಕ್‍ರನ್ನು ಠಾಣೆಗೆ ಕರೆಸಿಕೊಂಡು ನಿಂದಿಸಿ, ಮೊಬೈಲ್ ಅನ್ನು ಕಸಿದುಕೊಂಡಿದ್ದರೆಂದು ಆರೋಪಿಸಲಾಗಿತ್ತು.

ಕೊಪ್ಪ ಪೊಲೀಸರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದಲ್ಲದೇ ಜನಪರ ಹೋರಾಟಗಾರ ಅಶೋಕ್‍ರನ್ನು ಅವಮಾನಿಸಿದ ಪೊಲೀಸ್ ಪೇದೆ ರಮೇಶ್ ಹಾಗೂ ಠಾಣಾಧಿಕಾರಿ ರವಿ ಅವರನ್ನು ಅಮಾನತು ಮಾಡಬೇಕೆಂಬ ಕೂಗು ಎದ್ದಿತ್ತು. ಅಲ್ಲದೇ ಕೆ.ಎಲ್.ಅಶೋಕ್ ಅಭಿಮಾನಿಗಳು ಸೆ.14ರಂದು ಕೊಪ್ಪ ಪಟ್ಟಣದಲ್ಲಿ ಕೊಪ್ಪ ಚಲೋ ಚಳವಳಿಗೆ ಕರೆ ನೀಡಿದ್ದರು.

ಈ ನಡುವೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪ್ರಕರಣ ಸಂಬಂಧ ಎಎಸ್ಪಿ ಅವರಿಂದ ತನಿಖೆ ನಡೆಸಿದ್ದು, ಪೊಲೀಸ್ ಪೇದೆಯನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದಾಗಿ ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಎಎಸ್ಪಿ ಚಳವಳಿ ಮುಖಂಡರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ. ಹಿನ್ನೆಲೆಯಲ್ಲಿ ಕೊಪ್ಪ ಚಲೋ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಗೌಸ್ ಮೊಹಿದ್ದೀನ್ ವಾರ್ತಾಭಾರತಿಗೆ ತಿಳಿಸಿದ್ದಾರೆ.

ಬಜರಂಗದಳದಿಂದ ಕೊಪ್ಪ ಚಲೋ ಕಾರ್ಯಕ್ರಮಕ್ಕೆ ಬೆದರಿಕೆ: ಕೆ.ಎಲ್.ಅಶೋಕ್‍ರನ್ನು ನಡುರಸ್ತೆಯಲ್ಲಿ ಅವಮಾನಿಸಿರುವ ಪ್ರಕರಣ ಸಂಬಂಧ ಅವರ ಅಭಿಮಾನಿ ಬಳಗದಿಂದ ಸೆ.14ರಂದು ಕೊಪ್ಪ ಚಲೋ ಚಳವಳಿಗೆ ಕರೆ ನೀಡುತ್ತಿದ್ದಂತೆ ಕೊಪ್ಪ ತಾಲೂಕಿನ ಬಜರಂಗದಳದ ಮುಖಂಡರು ಹೇಳಿಕೆ ನೀಡಿ, ಕೊಪ್ಪ ಚಲೋ ಚಳವಳಿಗೆ ಅನುಮತಿ ನೀಡಿದಲ್ಲಿ ಚಳವಳಿಗೆ ಪ್ರತಿಯಾಗಿ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಪ್ಪ ಚಲೋ ಚಳವಳಿಗೆ ಜಿಲ್ಲಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಚಳವಳಿ ರದ್ದಾಗಿರುವ ಹಿನ್ನೆಲೆಯಲ್ಲಿ ಈ ಘಟನೆಯ ಕಾವು ಸದ್ಯಕ್ಕೆ ತಣ್ಣಗಾದಂತಾಗಿದೆ.

ಕೆ.ಎಲ್.ಅಶೋಕ್‍ರನ್ನು ಕೊಪ್ಪ ಪೊಲೀಸರು ಅವಮಾನಿಸಿದ್ದಾರೆಂಬ ಆರೋಪದ ಬಗ್ಗೆ ಮಾಹಿತಿ ಪಡೆದು ತನಿಖೆಗೆ ಸೂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸೆ.14ರಂದು ಕೊಪ್ಪ ಚಲೋ ಚಳವಳಿಗೆ ಅನುಮತಿ ನೀಡಿಲ್ಲ. ಈ ಚಳವಳಿಗೆ ಪ್ರತಿಯಾಗಿ ಬಜರಂಗದಳದವರ ಹೋರಾಟಕ್ಕೂ ಅನುಮತಿ ಇಲ್ಲ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಅಮಾನತು ಮಾಡಬೇಕೋ ಬಿಡಬೇಕೋ ಎಂಬುದನ್ನು ನಿರ್ಧರಿಸಲಾಗಿದೆ.

- ಅಕ್ಷಯ್ ಮಚೀಂದ್ರ, ಎಸ್ಪಿ

ಅಶೋಕ್ ಪ್ರಕರಣ ಸಂಬಂಧ ಪೊಲೀಸರು ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಪೊಲೀಸ್ ಪೇದೆಯನ್ನು ವರ್ಗಾವಣೆ ಮಾಡಿರುವುದಾಗಿ ಎಎಸ್ಪಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.14ರಂದು ಕೊಪ್ಪದಲ್ಲಿ ನಡೆಯಬೇಕಿದ್ದ ಕೊಪ್ಪ ಚಲೋ ಚಳವಳಿಯನ್ನು ರದ್ದು ಮಾಡಲಾಗಿದೆ.

- ಗೌಸ್ ಮೊಹಿದ್ದೀನ್, ಸಂವಿಧಾನ ಉಳಿಸಿ ಹೋರಾಟ ವೇದಿಕೆ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News