ಚಿಕ್ಕಮಗಳೂರು: ಶತಕ ದಾಟಿದ ಕೋವಿಡ್ ಸಾವಿನ ಸಂಖ್ಯೆ
ಚಿಕ್ಕಮಗಳೂರು, ಸೆ.13: ಜಿಲ್ಲೆಯಲ್ಲಿ ರವಿವಾರ ಕೋವಿಡ್-19 ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದು, 173 ಮಂದಿಗೆ ಕೊರೋನ ಸೋಂಕು ತಗಲಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾದ 103 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ರವಿವಾರ ಕಂಡು ಬಂದಿರುವ 173 ಕೊರೋನ ಸೋಂಕಿತರ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 62, ಕಡೂರು ತಾಲೂಕಿನಲ್ಲಿ 46, ತರೀಕೆರೆ ತಾಲೂಕಿನಲ್ಲಿ 35, ಮೂಡಿಗೆರೆ ತಾಲೂಕಿನಲ್ಲಿ 21, ಕೊಪ್ಪ ತಾಲೂಕಿನಲ್ಲಿ 4, ಶೃಂಗೇರಿ ತಾಲೂಕಿನಲ್ಲಿ 3 ಹಾಗೂ ನರಸಿಂಹರಾಜಪುರ ತಾಲೂಕಿನಲ್ಲಿ 2 ಮಂದಿಗೆ ಪಾಸಿಟಿವ್ ಇರುವುದು ವರದಿಯಿಂದ ತಿಳಿದುಬಂದಿದೆ.
ಸೋಂಕಿತರ ಪೈಕಿ 118 ಮಂದಿಯನ್ನು ಹೋಮ್ ಐಸೋಲೇಶನ್ ಮಾಡಲಾಗಿದ್ದು, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ 53 ಮಂದಿಯನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ವರದಿಯಾಗಿರುವ 173 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 6,066ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1,405 ಸಕ್ರೀಯ ಪ್ರಕರಣಗಳಿದ್ದು, ಕೊರೋನ ಆಸ್ಪತ್ರೆ ಹಾಗೂ ಹೋಮ್ ಐಸೋಲೇಶನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರವಿವಾರ 103 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 103 ಮಂದಿ ಸೇರಿ 4,560 ಸೋಂಕಿತರು ಗುಣಮುರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶತಕ ದಾಟಿದ ಸಾವಿನ ಸಂಖ್ಯೆ: ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ನಗರದ ಕೊರೋನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇತರ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ.
ರವಿವಾರ ಮೃತರಾದ ಇಬ್ಬರ ಪೈಕಿ ಇಬ್ಬರೂ ಮಹಿಳೆಯರಾಗಿದ್ದು, ಒಬ್ಬರು ಚಿಕ್ಕಮಗಳೂರು ನಗರದವರಾಗಿದ್ದು, ಮತ್ತೋರ್ವರು ಕಡೂರು ತಾಲೂಕಿನ ಕೋಡಿಹೋಚಿಹಳ್ಳಿ ಗ್ರಾಮದವರಾಗಿದ್ದಾರೆ. ಕೋವಿಡ್ ಮಾರ್ಗಸೂಚಿಯಂತೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಇಬ್ಬರ ಸಾವಿನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.