'ಮಹಾನಾಯಕ' ಪ್ರಸಾರ ನಿಲ್ಲಿಸಲು ಬೆದರಿಕೆ ಪ್ರಕರಣ: ಸೆ.15ರಂದು ಸಮಾನ ಮನಸ್ಕ ಸಂಘಟನೆಗಳಿಂದ ಧರಣಿ

Update: 2020-09-13 17:34 GMT

ಚಿಕ್ಕಮಗಳೂರು, ಸೆ.13: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ವಾಹಿನಿ ಮುಖ್ಯಸ್ಥರಿಗೆ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಸೆ.15ರಂದು ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾನ ಮನಸ್ಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಒಪ್ಪಿಕೊಂಡು ಅದರಂತೆ ನಾಗರಿಕರಾಗಿ ಬದುಕುವಂತಾಗಿದೆ. ಅವರ ಜೀವನ ಚರಿತ್ರೆಯನ್ನು ಒಪ್ಪಿಕೊಳ್ಳದ ಅಸಹಿಷ್ಣುತೆಯ ಮನಸ್ಥಿತಿಯುಳ್ಳ ಧರ್ಮಾಂಧರು, ಮನುವಾದಿಗಳು ಜಾತಿಯ ಹೆಸರಿನಲ್ಲಿ ಇಂತಹ ಕೃತ್ಯ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದರು.

ದೇಶ ಹಾಗೂ ರಾಜ್ಯಾದ್ಯಂತ ಮಹಾನಾಯಕ ಧಾರಾವಾಹಿ ಅನೇಕ ಸಮುದಾಯಗಳ ಮನಗೆದ್ದಿದೆ. ಮಹಾನಾಯಕ ಧಾರಾವಾಹಿಯಿಂದಾಗಿ ಶೋಷಿತ ಸಮುದಾಯಗಳು ಮನ ಪರಿವರ್ತನೆ ಹೊಂದುತ್ತಿರುವುದು ಆಧುನಿಕ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಧಾರಾವಾಹಿ ಪ್ರಸಾರ ಮಾಡುತ್ತಿರುವ ವಾಹಿನಿ ಮುಖ್ಯಸ್ಥರಿಗೆ ಸಮಾಜಿಕ ಜಾಲತಾಣ ಮತ್ತು ದೂರವಾಣಿ ಮೂಲಕ ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ ಒಡ್ಡುತ್ತಿರುವ ಸಮಾಜದ ಸ್ವಾಸ್ಥ್ಯ ಕೆಡಿಸುವ ಮನಸ್ಥಿತಿಯುಳ್ಳ ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರಕಾರ ನಿರ್ದಾಕ್ಷಣ್ಯ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪ್ರಗತಿಪರ ಚಿಂತಕ ಕೆ.ಎಲ್.ಅಶೋಕ್ ಅವರನ್ನು ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಸೈ ಹಾಗೂ ಪೇದೆಯೊಬ್ಬರು ಕುಟುಂಬಸ್ಥರ ಎದುರು ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಜನಪರ ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ನಿಂಧಿಸಿ, ಅವಮಾನಿಸಿರುವ ಪೊಲೀಸರ ನಡವಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಪೊಲೀಸ್ ಠಾಣಾಧಿಕಾರಿ ರವಿ ಹಾಗೂ ಪೇದೆ ರಮೇಶ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಇದೇ ವೇಳೆ ತಿಳಿಸಿದರು.

ಬಿಎಸ್ಪಿ ಮುಖಂಡ ಪರಮೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ಪ್ರಸಾರ ನಿಲ್ಲಿಸಬೇಕೆಂದು ಬೆದರಿಕೆ ಹಾಕುತ್ತಿರುವುದು ದೇಶ ಕಂಡ ಮಹಾನ್ ನಾಯಕರಿಗೆ ಮಾಡುತ್ತಿರುವ ಅವಮಾನವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದ ಮೇಲೂ ಜಾತಿಪದ್ಧತಿ ಇನ್ನೂ ಜೀವಂತವಾಗಿದೆ ಎಂದರೆ ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಾಗಿಲ್ಲ, ಅವರು ವಿಶ್ವಾದ್ಯಂತ ಖ್ಯಾತಿ ಪಡೆದಿರುವ ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡುವ ಸಾಧಕರಾಗಿದ್ದಾರೆ. ಧಾರಾವಾಹಿ ಮೂಲಕ ಜಾತಿ ವ್ಯವಸ್ಥೆಯ ಕರಾಳ ಮುಖದ ದರ್ಶನವಾಗುತ್ತಿರುವುದನ್ನು ಸಹಿಸದವರು ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹ ಕಿಡಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಧಾರಾವಾಹಿ ಪ್ರಸಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದರು

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ವಿ.ಹರೀಶ್ ಮಿತ್ರ, ಆರ್.ಆರ್.ಮಹೇಶ್, ಎಚ್.ಸಿ.ರಾಜೇಗೌಡ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News