ಹನೂರು: ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಆಸ್ಪತ್ರೆಗಳು; ಸಾರ್ವಜನಿಕರಿಂದ ಆಕ್ರೋಶ

Update: 2020-09-13 17:56 GMT

ಹನೂರು, ಸೆ. 13: ಹನೂರು ಪಟ್ಟಣದ ಸರಕಾರಿ ಆಸ್ಪತ್ರೆ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ಸೂಕ್ತ ಸಮಯದಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂದು ಜನರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೋನ ನೆಪವೊಡ್ಡಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಜನರಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಇತ್ತೀಚೆಗೆ ಹನೂರು ಪಟ್ಟಣದಲ್ಲಿ ಕೊರೋನ ಹೊರತು ಪಡಿಸಿ ಬೇರೆ ಆರೋಗ್ಯ ಸಮಸ್ಯೆಗಳಿದ್ದರೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ರಾತ್ರಿ ವೇಳೆಯಲ್ಲಂತೂ ಯಾವುದೇ ಆಸ್ಪತ್ರೆಗಳೂ ತೆರೆಯದೆ ಇರುವುದರಿಂದ ರೋಗಿಗಳು ಸಾವನಪ್ಪಿರುವ ಉದಾಹರಣೆಗಳು ಹೆಚ್ಚಿವೆ ಎಂದು ದೂರಲಾಗಿದೆ.

ಸರಕಾರಿ ಆಸ್ಪತ್ರೆಯ ವೈದ್ಯರು 24x7 ಸಮಯದಲ್ಲೂ ಜನರ ಸಂಕಷ್ಠಕ್ಕೆ ಸ್ಪಂದಿಸಬೇಕೆಂಬ ಸರಕಾರದ ಆದೇಶವಿದೆ. ಆದರೆ ಆದೇಶಕ್ಕೆ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ ಎಂಬತಾಗಿದೆ. ಹನೂರು ಪಟ್ಟಣ ವ್ಯಾಪ್ತಿಯ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಸೇವೆಯ ಉದ್ದೇಶವನ್ನು ಮರೆತು ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ. ರಾತ್ರಿ ಸಮಯ ತೆರಳಿದ ರೋಗಿಗಳಿಗೆ ಸೌಜನ್ಯಕಾದ್ದರೂ ಸ್ಪಂದಿಸುವ ಕಾಳಜಿಯೂ ಇಲ್ಲಿನ ವೈದ್ಯರಿಗಿಲ್ಲ ಎಂದು ಕೆಲ ರೋಗಿಗಳ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಜನಪತ್ರತಿನಿಧಿಗಳು ಇತ್ತ ಗಮನ ಹರಿಸಿ ಜನರಿಗೆ ಆರೋಗ್ಯ ಚಿಕಿತ್ಸೆ ಸೂಕ್ತ ಸಮಯದಲ್ಲಿ ಸಿಗುವಂತೆ ಮಾಡಬೇಕು ಎಂಬುದು ಹನೂರು ಪಟ್ಟಣ ನಿವಾಸಿಗಳ ಆಗ್ರಹವಾಗಿದೆ.

ಹನೂರು ಪಟ್ಟಣದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕೊರೋನ ನೆಪ ಹೇಳಿ, ಜನರಿಗೆ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ. ರಾತ್ರಿ ಸಮಯದಲ್ಲಂತೂ ಜನರ ಕಷ್ಟ ಹೇಳತೀರದು. ಇನ್ನಾದರೂ ಸರಕಾರಿ ಮತ್ತು ಖಾಸಗಿ ವೈದ್ಯರು ಜನರ ಆರೋಗ್ಯದ ಸಮಸ್ಯೆಗೆ ಸ್ಪಂದಿಸಲಿ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೊಳ್ಳಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

-ಆನಂದ್, ಹನೂರು ಪಟ್ಟಣ ಪಂಚಾಯತ್ ಸದಸ್ಯ

ಹನೂರು ಪಟ್ಟಣದಲ್ಲಿರುವ ನರ್ಸಿಂಗ್ ಹೋಮ್‌ಗಳಲ್ಲಿ ರಾತ್ರಿ ಸಮಯ ಚಿಕಿತ್ಸೆ ನೀಡದೇ ಇರುವ ಬಗ್ಗೆ ಶೀಘ್ರದಲ್ಲಿ ವಿಚಾರಣೆ ಮಾಡಲಾಗುವುದು. ಸರಕಾರಿ ಆಸ್ಪತ್ರೆ ಮತ್ತು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಜನರಿಗೆ ಎಲ್ಲ ಸಮಯದಲ್ಲೂ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಕ್ರಮ ಜರುಗಿಸಲಾಗುವುದು.
-ಡಾ. ರವಿ, ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ

Writer - ಅಭಿಲಾಷ್‌ ಗೌಡ

contributor

Editor - ಅಭಿಲಾಷ್‌ ಗೌಡ

contributor

Similar News