ಹಿರಿಯ ಅಧಿಕಾರಿ ವಾಸ್ತವ್ಯ ಹೂಡಿದ್ದರೂ ಬದಲಾಗದ ಕಾಲನಿ

Update: 2020-09-13 18:01 GMT

ಗುಂಡ್ಲುಪೇಟೆ, ಸೆ. 13: ಜಿಲ್ಲಾ ಪಂಚಾಯಯತ್ ಸಿಇಒ ಗ್ರಾಮದಲ್ಲಿ ಉಳಿದುಕೊಳ್ಳಲು ಬರುತ್ತಿದ್ದಾರೆ, ಇನ್ನು ಮುಂದೆ ಕಷ್ಟಗಳೆಲ್ಲಾ ದೂರವಾಗಿ ಬಿಡುತ್ತವೆ ಎಂದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಮದ್ದೂರು ಕಾಲನಿ ಜನರು ಕನಸು ಕಂಡಿದ್ದರು. ಆದರೆ ಊರಿನ ಕಥೆ ಆಗಿರಲಿ ಜಿಪಂ ಸಿಇಒ ವಾಸ್ತವ್ಯ ಹೂಡಿ ಎರಡು ವರ್ಷಗಳೇ ಕಳೆ ದರೂ ಇಳಿವಯಸ್ಸಿನ ವೃದ್ಧೆಯೋರ್ವರಿಗೂ ಒಂದು ಸೂರು ಸಿಕ್ಕಿಲ್ಲ.

ಸುಮಾರು 130 ಕುಟುಂಬಗಳಿರುವ ಈ ಕಾಲನಿಯಲ್ಲಿ ಚಾಮರಾಜನಗರ ಅಂದಿನ ಜಿಪಂ ಸಿಇಒ ಡಾ.ಕೆ.ಹರೀಶ್‌ ಕುಮಾರ್ 2018ರ ಸೆ.22ರಂದು ಗ್ರಾಮ ವಾಸ್ತವ್ಯ ಮಾಡಿದ್ದರು. ಎಲ್ಲರಿಗೂ ಮನೆ ಮಾಡಿಕೊಡುವುದಾಗಿ ಹೇಳಿ ಎರಡು ವರ್ಷಗಳಾದರೂ ಇಂದಿಗೂ ಮನೆ ನೀಡಿಲ್ಲ. ಹಾಡಿಯಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪುಟಾಣಿಗಳು ಶಾಲೆ ಅಂಗನವಾಡಿಗೆ ತೆರಳಿ ವಿದ್ಯಾಬ್ಯಾಸ ಪಡೆಯುತ್ತಿದ್ದು ಮೂಲ ಸೌಕರ್ಯದಿಂದಲೇ ಜನರು ವಂಚಿತರಾಗಿದ್ದಾರೆ.

ಕಾಲನಿಗೆ ಮೂಲಭೂತ ವ್ಯವಸ್ಥೆ ಆಗಲಿದೆ ಎಂದೆಲ್ಲ ಅಂದುಕೊಂಡಿದ್ದರೂ ಅದೆಲ್ಲವೂ ಅಂದಿನ ಸಿಇಒ ಮಾತಿನಲ್ಲೇ ಉಳಿದುಬಿಟ್ಟಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲು ಗ್ರಾಮಕ್ಕೆ ಬಸ್ ಸಂಪರ್ಕ ಇರಲಿಲ್ಲ. ಪ್ರಸ್ತುತ ಪ್ರತಿ ನಿತ್ಯ ಎರಡು ಬಾರಿ ಕೆಎಸ್ಸಾರ್ಟಿಸಿ ಬಸ್ ಸಂಚರಿಸುತ್ತಿದೆ. ಗ್ರಾಪಂನಿಂದ ಕಾಲನಿಗೆ 12 ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. 2 ವರ್ಷಗಳಿಂದ ಸರಕಾರದಿಂದ ಹೊಸ ಮನೆಗಳು ಬಿಡುಗಡೆಯಾಗಿಲ್ಲ. ಕೆಲವು ಬಡಾವಣೆಯಲ್ಲಿ ಚರಂಡಿ ಕಾಮಗಾರಿ ಮಾಡಲಾಗಿದೆ.
-ಶೀಲಾ, ಬೇರಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

ಗ್ರಾಮ ವಾಸ್ತವ್ಯಕ್ಕೆ ಬಂದ ಅಧಿಕಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ. ಪ್ರಚಾರ ಪಡೆಯಲು ಗ್ರಾಮ ವಾಸ್ತವ್ಯ ಮಾಡುತ್ತಾರೆ. ಬಂದಂತಹ ಡಾ. ಕೆ.ಹರೀಶ್‌ಕುಮಾರ್ ಅವರು ಈ ಬಗ್ಗೆ ಗಮನಹರಿಸಲಿಲ್ಲ. ಅವರ ವರ್ಗಾವಣೆಯ ನಂತರ ಬಂದ ಅಧಿಕಾರಿಗಳು ಕೂಡ ಈ ಬಗ್ಗೆ ಕಾಳಜಿ ವಹಿಸಿಲ್ಲ.
-ಸುರೇಶ್, ಮದ್ದೂರು ಕಾಲನಿ ನಿವಾಸಿ

Writer - ಮಹದೇವಪ್ರಸಾದ್ ಹಂಗಳ

contributor

Editor - ಮಹದೇವಪ್ರಸಾದ್ ಹಂಗಳ

contributor

Similar News