ತುಮಕೂರು: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸರಕಾರಿ ವೈದ್ಯರ ಪ್ರತಿಭಟನೆ, ಜಿಲ್ಲಾಧಿಕಾರಿಗೆ ಮನವಿ

Update: 2020-09-14 10:35 GMT

ತುಮಕೂರು,ಸೆ.14: ಹತ್ತಾರು ವರ್ಷಗಳಿಂದ ಮುಂದೂಡುತ್ತಾ ಬಂದಿರುವ ಸರಕಾರಿ ವೈದ್ಯರ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ,  ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮತ್ತು ಜಿಲ್ಲಾ ಸರ್ಜನ್ ಡಾ.ಟಿ.ಇ. ವೀರಭದ್ರಯ್ಯ ಅವರ ನೇತೃತ್ವದಲ್ಲಿ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಆರ್.ರಮೇಶ್ ಮತ್ತು ಕಾರ್ಯದರ್ಶಿ ಡಾ.ಶ್ರೀನಾಥ್ ಹಾಗೂ ವೈದ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರಕಾರಿ ವೈದ್ಯರ ವೇತನ ಪರಿಷ್ಕರಣೆ ಮಾಡಬೇಕೆಂಬುದು ವೈದ್ಯರ ಹಲವು ದಿನದ ಬೇಡಿಕೆಯಾಗಿದ್ದರೂ ಸರಕಾರ 2009 ರಿಂದ ಕೇವಲ ಪ್ರೋತ್ಸಾಹ ಧನವನ್ನು ಮಾತ್ರ ನೀಡುತ್ತಾ ಬಂದಿದೆ. ಈ ಸಂಬಂಧ ಹಲವು ಬಾರಿ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆರು ತಿಂಗಳ ಹಿಂದೆ ಸರಕಾರಿ ವೈದ್ಯರಿಗೆ ಸಿಜಿಹೆಚ್‍ಎಸ್ ವೇತನ ನೀಡುವ ಸಂಬಂಧ ಸಭೆ ನಡೆಸಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮತ್ತೆ ಮಂದೂಡುವ ಮಾತುಗಳನ್ನು ಸಚಿವರು ಮತ್ತು ಮುಖ್ಯಮಂತ್ರಿಗಳು ಆಡುತ್ತಿದ್ದು, ಈ ಸಂಬಂಧ ಸೆಪ್ಟಂಬರ್ 12 ರಂದು ನಡೆದ ಸಭೆಯಲ್ಲಿ ಸೆ.14ರಂದು ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ನಿರ್ಧರಿಸಲಾಗಿತ್ತು. ಆದರಂತೆ ಇಂದು ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಸೆ.21ರೊಳಗೆ ರಾಜ್ಯ ಸರಕಾರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಿದ್ದರೆ, ಕೇಂದ್ರ ಸರಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಜಿಲ್ಲಾ ಸಂಘ ಬದ್ಧವಾಗಿ ಕೆಲಸ ಮಾಡಲಿದೆ ಎಂದು ಸರಕಾರಿ ವೈದ್ಯರ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀನಾಥ್ ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಆರ್.ರಮೇಶ್ ಮಾತನಾಡಿ,ಇಂದಿನಿಂದ ಸೆ.21ರವರೆಗೆ ಸರಕಾರಿ ವೈದ್ಯರು ಕೋವಿಡ್-19 ಸೇರಿದಂತೆ ಎಲ್ಲಾ ಕೆಲಸಗಳನ್ನು ಎಂದಿನಂತೆ ನಿರ್ವಹಿಸಿದರೂ ಸರಕಾರಕ್ಕೆ ವರದಿ ಸಲ್ಲಿಸದಿರಲು ನಿರ್ಧರಿಸಲಾಗಿದೆ. ಒಂದು ವೇಳೆ 21ರ ನಂತರವೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಸರಕಾರವೇ ಹೊಣೆ ಎಂದರು. ಪ್ರತಿಭಟನೆಯಲ್ಲಿ ಹಲವು ವೈದ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News