×
Ad

ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ವಿಚಾರಣಾ ನ್ಯಾಯಾಲಯದ ವಿವರಣೆ ಕೇಳಿದ ಹೈಕೋರ್ಟ್

Update: 2020-09-14 16:24 IST

ಬೆಂಗಳೂರು, ಸೆ.14: ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಕುಮಾರಸ್ವಾಮಿಗೆ ಜಾಮೀನು ನೀಡಲು ಮತ್ತೆ ನಿರಾಕರಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವ ಕುರಿತು ವಿವರಣೆ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಜಾಮೀನು ಕೋರಿ ಆರೋಪಿ ಕುಮಾರಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಎ.ಪಾಟೀಲ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ. ವಿಚಾರಣೆ ವಿಳಂಬವಾಗುತ್ತಿದೆ ಎಂಬ ಅಂಶ ಪರಿಗಣಿಸಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ. 

ಇದೇ ವೇಳೆ ಹೈಕೋರ್ಟ್ ಸೂಚನೆ ಮೇರೆಗೂ ವಿಚಾರಣಾ ನ್ಯಾಯಾಲಯ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೀಠ, ಯಾವ ಕಾರಣಕ್ಕಾಗಿ ವಿಳಂಬವಾಗುತ್ತಿದೆ ಎಂಬುದಕ್ಕೆ ವಿವರಣೆ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ಈ ಕುರಿತು ಮಾಹಿತಿ ಪಡೆದುಕೊಳ್ಳಲು ಹೈಕೋರ್ಟ್ ರಿಜಿಸ್ಟ್ರಾರ್ ಗೆ ನಿರ್ದೇಶಿಸಿದೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿ ಪರ ವಕೀಲರು ವಾದಿಸಿ, ಅಜಿದಾರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2019ರ ಸೆ.9ರಂದು ಇದೇ ಹೈಕೋರ್ಟ್ ವಜಾಗೊಳಿಸಿತ್ತು. ಈ ವೇಳೆ, ಪ್ರಕರಣದ ವಿಚಾರಣೆಯನ್ನು 1 ವರ್ಷದ ಒಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಆದರೆ, ಈವರೆಗೆ ವಿಚಾರಣೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ದೋಷಾರೋಪ ಕೂಡ ನಿಗದಿಪಡಿಸಿಲ್ಲ. ಅಲ್ಲದೇ, ಪ್ರಕರಣದಲ್ಲಿ 229 ಸಾಕ್ಷ್ಯಗಳನ್ನು ಗುರುತಿಸಲಾಗಿದ್ದು, 5 ಸಾವಿರಕ್ಕೂ ಅಧಿಕ ಪುಟಗಳ ಬೃಹತ್ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲು ಸಾಕಷ್ಟು ಸಮಯ ಹಿಡಿಯಲಿದೆ. ಪ್ರಕರಣದ 18 ಆರೋಪಿಗಳ ಪೈಕಿ ಈಗಾಗಲೇ 17 ಮಂದಿಗೆ ಜಾಮೀನು ಸಿಕ್ಕಿದೆ. ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಕೊಕಾ ಕಾಯ್ದೆ ಸಹ ಅನ್ವಯವಾಗುವುದಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: 2016ರ ಮಾರ್ಚ್ 21ರಂದು ನಡೆದಿದ್ದ ದ್ವಿತೀಯ ಪಿಯು ರಸಾಯನಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆ ಅದೇ ದಿನ ದಿನ ಬೆಳಗ್ಗೆ 7.30ಕ್ಕೆ ಸೋರಿಕೆಯಾಗಿ ವಾಟ್ಸ್ ಆ್ಯಪ್‍ನಲ್ಲಿ ಹರಿದಾಡಿತ್ತು. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿತ್ತು. ತನಿಖೆ ನಡೆಸಿದ್ದ ಸಿಐಡಿ, 2016ರ ಮೇ 10ರಂದು ಕುಮಾರಸ್ವಾಮಿಯನ್ನು ಬಂಧಿಸಿದ್ದು, ಆರೋಪಿ ಅಂದಿನಿಂದ ಈವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News