ಒಳ ಮೀಸಲಾತಿ ಮೂಲಕ ದಲಿತ ಸಮುದಾಯವನ್ನು ಒಡೆಯುವ ಯತ್ನ: ದಲಿತ ಮುಖಂಡ ಪುರುಷೋತ್ತಮ್

Update: 2020-09-14 12:04 GMT

ಮೈಸೂರು,ಸೆ.14: ಒಳಮೀಸಲಾತಿಯ ಗುಮ್ಮವನ್ನು ಹರಿ ಬಿಟ್ಟು ರಾಜಕೀಯ ಪಕ್ಷಗಳು ದಲಿತ ಸಮುದಾಯವನ್ನು ಒಡೆಯಲು ಯತ್ನಿಸುತ್ತಿವೆ ಎಂದು ಮಾಜಿ ಮಹಾಪೌರ ಹಾಗೂ ರಾಜ್ಯ ಅದಿಕರ್ನಾಟಕ ಮಹಾಸಭಾದ ದಲಿತ ಮುಖಂಡ ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ನಮ್ಮ ಹಕ್ಕು. ದಲಿತ ಸಮುದಾಯದ ಎಡ ಬಲ ಒಂದೇ ತಾಯಿ ಮಕ್ಕಳು ಇದ್ದ ಹಾಗೆ. ಆದರೆ ರಾಜಕೀಯ ಪಕ್ಷಗಳು ಮತ ಬ್ಯಾಂಕ್‍ಗಾಗಿ ಒಳಮೀಸಲಾತಿ ಹೆಸರಿನಲ್ಲಿ ಬೇರ್ಪಡಿಸಲು ಸಂಚು ನಡೆಸುತ್ತಿವೆ ಎಂದು ಹೇಳಿದರು.

ಸದಾಶಿವ ಆಯೋಗದ ವರದಿ ಜಾರಿಗೂ ಮುನ್ನ ಅದು ಸಾರ್ವಜನಿಕ ಚರ್ಚೆಯಾಗಬೇಕು. ನಂತರ ಇದರ ಸಾಧಕ ಭಾದಕಗಳನ್ನು ಚರ್ಚಿಸಿ ಅಂತಿಮ ತಿರ್ಮಾನ ಕೈಗೊಳ್ಳಬೇಕು. ಆದರೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಸದಾಶಿವ ಆಯೋಗದ ವರಿ ಜಾರಿ ಮಾಡಲು ನಿಂತಿದೆ ಎಂದು ಕಿಡಿಕಾರಿದರು. 

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಕುರಿತು ಹಾಗೂ ಒಳ ಮೀಸಲಾತಿ ಜಾರಿ ಕುರಿತು ಮೈಸೂರಿನ ಉರಿಲಿಂಗ ಪೆದ್ದಿ ಮಠದಲ್ಲಿ ರಾಜ್ಯ ಆದಿಕರ್ನಾಟಕ ಮಹಾಸಭಾ ಪದಾಧಿಕಾರಿಗಳು, ರಾಜ್ಯದ ಹಿರಿಯ ಮುಖಂಡರು, ಸಾಹಿತಿಗಳು, ಚಿಂತಕರು, ವಿದ್ಯಾರ್ಥಿ ಮುಖಂಡರು ಸಭೆ ಸೇರಿ ಭಂತೆ ಬೋದಿದತ್ತ ಹಾಗೂ ಜ್ಞಾನಪ್ರಕಾಶ ಸ್ವಾಮಿಗಳ ಸಮ್ಮುಖದಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ನಿರ್ಣಯಗಳು: ಸದಾಶಿವ ಆಯೋಗದ ವರದಿಯನ್ನು ಮೊದಲು ಅಧಿಕೃತವಾಗಿ ಸರ್ಕಾರಿ ದಾಖಲೆಯನ್ನಾಗಿ ಮಾಡಬೇಕು. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಹಾಗೂ ಸಾರ್ವಜನಿಕ ಚರ್ಚೆಗೆ ತಂದು ಜನಾಭಿಪ್ರಾಯವನ್ನು ಮೂಡಿಸಬೇಕು. ಪ್ರಸಕ್ತ ಜನಸಂಖ್ಯೆ ಹಾಗೂ ಉದ್ಯೋಗ ವಿದ್ಯಾರ್ಹತೆ ಅನ್ವಯ ಸೌಲಭ್ಯಗಳ ಅಂಕಿ ಅಂಶಗಳನ್ನು ವರದಿಯಲ್ಲಿ ಸೇರಿಸುವ ಬಗ್ಗೆ ಹಾಗೂ ಜಾತಿ ಜನ ಸಂಖ್ಯೆವಾರು ಮೀಸಲಾತಿಯನ್ನು ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಸಾರ್ವಜನಿಕ ಚರ್ಚೆಯಾದ ಒಳಮೀಸಲಾತಿಗೆ ಸಚಿವ ಸಂಪುಟ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಒಳಮೀಸಲಾತಿ ಸಂವಿಧಾನಬದ್ಧವಾಗಿದೆಯೇ ಎಂದು ಕಾನೂನು ತಜ್ಞರ ಅಭಿಪ್ರಾಯ ಹಾಗೂ ವಿಚಾರ ಸಂಕಿರಣ ಏರ್ಪಡಿಸಿ, ನಂತರ ಜಾರಿಗೊಳಿಸಲು ಸರ್ಕಾರ ನಿರ್ಧಾರ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಪ್ಪ, ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಸಂಚಾಲಕ ಸೋಮಯ್ಯ ಮಲೆಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News