ಕ್ಷೌರಿಕರಿಗೆ ಒಳ ಮೀಸಲಾತಿ ಕಲ್ಪಿಸಲು ಆಗ್ರಹ

Update: 2020-09-14 13:11 GMT

ಬೆಂಗಳೂರು, ಸೆ. 14: ಕ್ಷೌರಿಕ ಸಮುದಾಯವು ಪರಿಶಿಷ್ಟ ಜಾತಿ(ಎಸ್ಸಿ)ಯ ಒಂದು ಭಾಗ. ಸುಪ್ರೀಂ ಕೋರ್ಟ್ ಸೂಚನೆಯಂತೆ ಒಳ ಮೀಸಲಾತಿ ವರ್ಗೀಕರಣ ಸ್ವಾಗತಾರ್ಹ. ಅದೇ ರೀತಿಯಲ್ಲಿ ಕ್ಷೌರಿಕ ಸಮುದಾಯಕ್ಕೂ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ಶಿವಕುಮಾರ್ ಆಗ್ರಹಿಸಿದ್ದಾರೆ.

ಕ್ಷೌರಿಕರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕ್ಷೌರ ಸೇವೆ ನಿರಾಕರಿಸಿ ಮೀಸಲಾತಿಯಿಂದ ವಂಚಿತರಾಗಿದ್ದೇವೆ. ಬಲಿಷ್ಠ ಜಾತಿಗಳಿಗೆ ಮುಕ್ತವಾಗಿ ಕ್ಷೌರ ಸೇವೆಯನ್ನು ನೀಡಿ, ಪರಿಶಿಷ್ಟರನ್ನು ಹಾಗೂ ಅಂಬೇಡ್ಕರ್ ರವರಿಗೆ ಕ್ಷೌರ ಸೇವೆ ಮಾಡದೆ ಕಡೆಗಣಿಸಿದ್ದಕಾಗಿ ಇವತ್ತು ನಾವು ಪರಿಶಿಷ್ಟ ಜಾತಿಗೆ ಸೇರಿಲ್ಲ. ಆ ಸಮಯದಲ್ಲಿ ಎಲ್ಲ ಸಮುದಾಯಕ್ಕೆ ಕ್ಷೌರ ಸೇವೆ ನೀಡಿದ್ದರೆ ಡಾ. ಬಿ.ಆರ್.ಅಂಬೇಡ್ಕರ್ ರವರು ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಕ್ಷೌರಿಕರು ಊರಿನ ಪ್ರಬಲ ಜಾತಿಗಳ ಮುಖಂಡರ ಹಾಗೂ ಬಲಿಷ್ಟ ಜಾತಿಗಳ ದೌರ್ಜನ್ಯಕ್ಕೆ, ಮುಲಾಜಿಗೆ ಹೆದರಿ ಇವತ್ತು ಹಿಂದುಳಿದ ವರ್ಗದಲ್ಲಿ ಅಪಮಾನಕ್ಕೆ, ಜಾತಿನಿಂದನೆಗೆ ಅಪಹಾಸ್ಯಕ್ಕೆ ಗುರಿಯಾಗಿ ಹಿಂದುಳಿದವರಲ್ಲಿ ಅತಿ ಹಿಂದುಳಿದವರೇ ಆಗಿ ಉಳಿದಿದ್ದೇವೆ. ಆದುದರಿಂದ ಈಗಲಾದರೂ ಎಲ್ಲ ದಲಿತ ಸಮುದಾಯಕ್ಕೆ ಕ್ಷೌರ ಸೇವೆಯನ್ನು ನೀಡಬೇಕು ಎಂದು ರಾಜ್ಯದ ಎಲ್ಲ ಕ್ಷೌರಿಕರಲ್ಲೂ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕ್ಷೌರಿಕ ಸಮಾಜಕ್ಕೆ ಧ್ವನಿಯಿಲ್ಲ, ಜಾತಿಯ ಬಲವೂ ಇಲ್ಲದೆ ಶಕ್ತಿ ಹೀನವಾದ ಈ ನಿರ್ಗತಿಕ ಕ್ಷೌರಿಕ ಸಮಾಜಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಪರಿಶಿಷ್ಟ ವರ್ಗದ ಮಂತ್ರಿಗಳು, ಶಾಸಕರು, ಮಾಜಿ ಮಂತ್ರಿಗಳು ಸ್ವಯಂಪ್ರೇರಿತರಾಗಿ ನಮಗೆ ಶೈಕ್ಷಣಿಕ, ರಾಜಕೀಯವಾಗಿ ಒಳಮೀಸಲಾತಿಯನ್ನು ಕೊಡಿಸಿ, ಸಾಮಾಜಿಕ ನ್ಯಾಯ ಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News