'ಮಹಾನಾಯಕ' ಪ್ರಸಾರ ಮಾಡದಂತೆ ಬೆದರಿಕೆ: ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಆಗ್ರಹ

Update: 2020-09-14 13:27 GMT

ಚಿಕ್ಕಮಗಳೂರು, ಸೆ.14: ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಮಹಾನಾಯಕ ಧಾರಾವಾಹಿ ಪ್ರಸಾರ ಮಾಡದಂತೆ ಬೆದರಿಕೆಯೊಡ್ಡಿರುವ ದುಷ್ಕರ್ಮಿಗಳ ವಿರುದ್ಧ ಕಠಿಣಕ್ರಮ ಜರುಗಿಸುವಂತೆ ಸೋಮವಾರ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮನವಿ ನೀಡಿ ಮಾತನಾಡಿ, ಝೀ ಕನ್ನಡ ವಾಹಿನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಮಹಾನಾಯಕ ಧಾರವಾಹಿ ಪ್ರಸಾರ ಆಗುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಅಂಬೇಡ್ಕರ್ ಅನುಭವಿಸಿದ ಕಷ್ಟಗಳು, ಅದರಿಂದ ಅವರು ಕಲಿತ ಪಾಠಗಳು ಹಾಗೂ ಅದನ್ನೆ ಸವಾಲಾಗಿ ಸ್ವೀಕರಿಸಿ ಅವರು ಮೇಲೆಬಂದ ರೀತಿ ಸಾಮಾನ್ಯ ಜನರಿಗೆ ಪ್ರೇರಣೆಯಾಗಿದೆ. ವಿಶೇಷವಾಗಿ ಹಿಂದುಳಿದ ಮತ್ತು ದಲಿತರಿಗೆ ಈ ಧಾರಾವಾಹಿ ಬದುಕು ರೂಪಿಸಿಕೊಳ್ಳಲು ಸ್ಪೂರ್ತಿಯಾಗಿದೆ ಎಂದರು.

ದಲಿತ ಹುಡುಗನೊಬ್ಬನಿಗೆ ತಾನು ಓದಿ ಏನಾದರೂ ಸಾಧಿಸಬೇಕೆಂಬ ಛಲ ಬಂದಿರುವುದಂತೂ ನಿಜ, ಆದರೆ ಮುಂದಿನ ಕಂತುಗಳಲ್ಲಿ ಒಂದಿಷ್ಟು ಜನರ ಬಣ್ಣ ಬಯಲಾಗುವ ಹಿನ್ನೆಲೆಯಲ್ಲಿ ಧಾರವಾಹಿಯನ್ನು ನಿಲ್ಲಿಸುವಂತೆ ವಾಹಿನಿ ಮುಖ್ಯಸ್ಥರಿಗೆ ಬೆದರಿಕೆ ಒಡ್ಡುತ್ತಿರುವುದು ಹಾಗೂ ಒತ್ತಡ ಹಾಕುತ್ತಿರುವುದು ಅತ್ಯಂತ ಖಂಡನೀಯ. ಅಂದು ಅಂಬೇಡ್ಕರ್ ಅವರನ್ನು ಹೀನಾಯವಾಗಿ ನೆಡೆಸಿಕೊಂಡ ಮಾನಸಿಕತೆಯ ವ್ಯಕ್ತಿಗಳೇ ಇಂದು ಧಾರವಾಹಿಯ ಪ್ರಚಾರಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ದುರುದೃಷ್ಟಕರ. ಇದನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹುಲ್ಲಳ್ಳಿಲಕ್ಷ್ಮಣ್, ನಗರ ಎಸ್.ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಸದಸ್ಯ ಹಿರಿಗಯ್ಯ, ತಾಪಂ ಸದಸ್ಯೆ ದೀಪನಾಗೇಶ್, ಸಿ.ಡಿ.ಎ ಸದಸ್ಯ ರಾಜ್‍ಕುಮಾರ್ ಮುಖಂಡರಾದ ಉಮೇಶ್, ಜಗದೀಶ್, ಮಂಜು, ಯತೀಶ, ಶೇಖರ್, ಚಂದ್ರು, ರೇವನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News