ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲು ಸೇರಿದ ನಟಿ ರಾಗಿಣಿ

Update: 2020-09-14 16:36 GMT

ಬೆಂಗಳೂರು, ಸೆ.14: ಸ್ಯಾಂಡಲ್ ವುಡ್ ಡ್ರಗ್ಸ್ ಆರೋಪ ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿ ಸೇರಿ ಐವರನ್ನು ನಗರದ 1ನೆ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಹಿನ್ನೆಲೆ ಆರೋಪಿಗಳನ್ನು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ರವಾನೆ ಮಾಡಲಾಯಿತು.

ಡ್ರಗ್ಸ್ ದಂಧೆ ಆರೋಪ ಸಂಬಂಧ ಸತತ ಎರಡು ವಾರಗಳಿಂದ ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ರಾಗಿಣಿ ದ್ವಿವೇದಿ ಸೇರಿ ಐವರು ಆರೋಪಿಗಳನ್ನು 1ನೆ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.

ಆರೋಪಿಗಳಾದ ರಾಗಿಣಿ, ಪ್ರಶಾಂತ್ ರಂಕಾ, ಸಿಮೋನ್, ರಾಹುಲ್ ಹಾಗೂ ನಿಯಾಝ್‍ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಇದಾದ ನಂತರ, ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿಯೇ 14 ದಿನ(ಸೆ.27ರವರೆಗೆ) ಆರೋಪಿಗಳು ಬಂಧನದಲ್ಲಿ ಇರಲಿದ್ದಾರೆ ಎಂದು ಸಿಸಿಬಿ ತಿಳಿಸಿದೆ.

ನ್ಯಾಯಾಂಗ ಬಂಧನಕ್ಕೂ ಮೊದಲು ರಾಗಿಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗಟಿವ್ ಬಂದಿದೆ ಎಂದು ತಿಳಿದುಬಂದಿದೆ.

ಪರಪ್ಪನ ಅಗ್ರಹಾರದಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ವಿಚಾರಣಧೀನ ಕೈದಿ ಸಂಖ್ಯೆ ನೀಡಲಾಗುತ್ತದೆ. ಜೊತೆಗೆ, ಎಲ್ಲಾ ಆರೋಪಿಗಳು ಸಾಮಾನ್ಯ ಖೈದಿಗಳಂತೆ ಜೈಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಹಿಳಾ ಬ್ಯಾರಕ್‍ನಲ್ಲಿ ರಾಗಿಣಿ ತಂಗಲಿದ್ದು, ಇನ್ನುಳಿದ ಆರೋಪಿಗಳನ್ನು ಪುರಷರ ಬ್ಯಾರಕ್‍ನಲ್ಲಿ ಇರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಂಜನಾ ಮತ್ತೆ ವಶಕ್ಕೆ

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನಟಿ ಸಂಜನಾ ಅವರನ್ನು ಸೆ.16ರವರೆಗೆ (ಇನ್ನೂ ಎರಡು ದಿನಗಳ ಕಾಲ) ಪೊಲೀಸರಿಗೆ ಒಪ್ಪಿಸಿ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಇವರೊಂದಿಗೆ ವಿರೇನ್ ಖನ್ನಾ, ರವಿಶಂಕರ್ ಎಂಬವರನ್ನು ಎರಡು ದಿನ ಪೊಲೀಸ್ ವಶಕ್ಕೆ ನೀಡಲಾಗಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News