ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಬರಗೂರು ರಾಮಚಂದ್ರಪ್ಪ

Update: 2020-09-14 14:24 GMT

ಬೆಂಗಳೂರು, ಸೆ.14: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಂಗ್ರೆಸ್ ಪಕ್ಷದ ನಿಲುವೇನು ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.

ಈ ಸಂಬಂಧ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರುಗಳಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಕಟಿಸಿದ್ದಲ್ಲದೇ ಅದರ ಸಮರ್ಥನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಶಿಕ್ಷಣಾಸಕ್ತರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಕೆಲವು ಕಾರ್ಯಕ್ರಮಗಳಲ್ಲಿ ಪೂರ್ಣ ಪ್ರಶಂಸೆ ಪ್ರಕಟವಾಗಿದೆ. ಇನ್ನು ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ, ರಾಜ್ಯದ ಅಧಿಕೃತ ವಿರೋಧ ಪಕ್ಷ ಮಾತ್ರ ಮೌನವಾಗಿದೆ. ಈ ಮೌನವು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಪೂರಕವಲ್ಲ ಎಂದು ಹೇಳಿದ್ದಾರೆ.

ಶಿಕ್ಷಣವು ಸಂವಿಧಾನದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಂಬಂಧಿಸಿದ್ದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇತರೆ ಅಂಶಗಳ ಜೊತೆಗೆ ಒಕ್ಕೂಟ ವ್ಯವಸ್ಥೆಯ ನೆಲೆಯಲ್ಲೂ ಅಡಗಿದೆ. ಆದುದರಿಂದ ರಾಜ್ಯದ ವಿರೋಧ ಪಕ್ಷದ ನಿಲುವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಇತರೆ ಕೆಲವು ವಿಷಯಗಳ ಬಗ್ಗೆ ದೊಡ್ಡ ದನಿಯಲ್ಲಿ ಮಾತಾಡುತ್ತಿದೆ. ಆದರೆ, ಶಿಕ್ಷಣ ಮತ್ತು ಸಂಸ್ಕೃತಿ ಸಂಬಂಧಿ ವಿಷಯಗಳಲ್ಲಿ ತನ್ನ ಪಕ್ಷ ಪರಂಪರೆಗೆ ಅನುಗುಣವಾಗಿ ಉಪೇಕ್ಷೆ ತೋರುತ್ತದೆ. ವಿರೋಧ ಪಕ್ಷಗಳಲ್ಲಿ ಎಡಪಕ್ಷಗಳಷ್ಟೇ ಶಿಕ್ಷಣ ಮತ್ತು ಸಂಸ್ಕೃತಿ ವಿಷಯಗಳಲ್ಲಿ ಸೈದ್ದಾಂತಿಕವಾಗಿ ಸ್ಪಷ್ಟ ನಿಲುವನ್ನು ಪ್ರಕಟಿಸುತ್ತಿವೆ.

ಬಿಜೆಪಿಯು ಶಿಕ್ಷಣ ಹಾಗೂ ಸಂಸ್ಕೃತಿ ವಿಷಯಗಳು ಆದ್ಯತೆಯಾಗಿದ್ದು, ತನ್ನ ಕಾರ್ಯಸೂಚಿಯನ್ನು ಅಳವಡಿಸಿ, ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಯಲ್ಲಿರುತ್ತದೆ. ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಇನ್ನಾದರೂ ಶಿಕ್ಷಣ ಮತ್ತು ಸಂಸ್ಕೃತಿ ವಿಷಯಗಳಿಗೆ ಆದ್ಯತೆ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎನ್‍ಇಪಿ ಬಗ್ಗೆ ಸ್ಪಷ್ಟವಾದ ನಿಲುವನ್ನು ಪ್ರಕಟಿಸಬೇಕು. ಈ ನೀತಿಯನ್ನು ಪೂರ್ತಿ ಒಪ್ಪುವುದು ಅಥವಾ ಒಪ್ಪದಿರುವುದು, ಕೆಲ ಅಂಶಗಳ ಒಪ್ಪಿ ಮರು ಪರಿಶೀಲನೆಗೆ ಒತ್ತಾಯಿಸುವುದನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News