ಹಿಂದಿ ಹೇರಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಆಕ್ರೋಶ

Update: 2020-09-14 14:45 GMT
Photo: Facebook

ಬೆಂಗಳೂರು, ಸೆ.14: ಕೇಂದ್ರ ಸರಕಾರದಿಂದ ಆಚರಿಸಲ್ಪಡುವ ಹಿಂದಿ ದಿವಸ್ ದಿನಕ್ಕೆ ಪರ್ಯಾಯವಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವೇ ರಾಷ್ಟ್ರೀಯ ಭಾಷೆ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದರು.

ಸಾಮಾಜಿಕ ಜಾಲತಾಣಗಳಾದ ಪೇಸ್‍ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ವಾಟ್ಸಾಪ್‍ಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನರು, ಹೋರಾಟಗಾರರು, ಯುವಜನತೆ ‘ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ’, ‘ಹಿಂದಿ ದಿವಸ್‍ಗೆ ಧಿಕ್ಕಾರ’ ಸೇರಿದಂತೆ ಹಲವು ಘೋಷಣೆಗಳನ್ನು ಒಳಗೊಂಡ ಸ್ಟೇಟಸ್, ಫೋಟೋ ಪ್ರೇಮ್‍ಗಳನ್ನು ಹಾಕಿಕೊಂಡು ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಬಹುಭಾಷಾ ನಟ ಪ್ರಕಾಶ್ ರೈ, ನಟ ಚೇತನ್, ಧನಂಜಯ್ ಸೇರಿದಂತೆ ಹಲವು ನಟರು, ನಿರ್ದೇಶಕರು, ಸಂಘ-ಸಂಸ್ಥೆಗಳ ನಾಯಕರು ಕನ್ನಡಿಗರಿಗೆ ಕನ್ನಡವೇ ಮುಖ್ಯ ಎಂದು ಸಾರಿ ಹೇಳಿದ್ದಾರೆ. ಅಲ್ಲದೆ, ನಿಖಿಲ್ ಕುಮಾರಸ್ವಾಮಿ, ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಕೆ.ಎಂ.ಚೈತನ್ಯ ಸೇರಿದಂತೆ ಹಲವರು ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಹಿಂದಿ ಹೇರಿಕೆ ವಿರುದ್ಧದ ಅಭಿಯಾನದ ವಿರುದ್ಧವಾಗಿಯೂ ಅನೇಕರು ಕಮೆಂಟಿಸಿದ್ದಾರೆ.

ಈ ಸಂಬಂಧ ಟ್ವಿಟರ್ ಹಾಗೂ ಪೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಬಹುಭಾಷಾ ನಟ ಪ್ರಕಾಶ್ ರೈ, ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂಬ ಟೀ ಶರ್ಟ್ ಧರಿಸಿ ಹಿಂದಿ ಹೇರಿಕೆ ವಿರುದ್ಧ ಹೋರಾಟ ಆರಂಭಿಸಿ, ಅಭಿಯಾನಕ್ಕೆ ಜತೆಯಾಗಿದ್ದಾರೆ. ನಾನು ಹಲವು ಭಾಷೆ ಬಲ್ಲೆ. ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ, ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ ಬೇಡ ಎಂದು ಅವರು ಬರೆದುಕೊಂಡಿದ್ದಾರೆ.

ನಟ ಧನಂಜಯ್ ಟ್ವಿಟರ್ ನಲ್ಲಿ ನನ್ನ ದೇಶ ಭಾರತ, ನನ್ನ ಬೇರು ಕನ್ನಡ, ಎಲ್ಲ ಭಾಷೆಯನ್ನು ಗೌರವಿಸುತ್ತೇನೆ, ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ, ಯಾವುದೇ ಹೇರಿಕೆ ಸಲ್ಲದು ಎಂದು ಬರೆದುಕೊಂಡಿದ್ದಾರೆ.

ಇನ್ನು, ಆ ದಿನಗಳು ಖ್ಯಾತಿನ ನಟ ಚೇತನ್ ಹಿಂದಿ ಗೊತ್ತಿಲ್ಲ ಹೋಗ್ರೊ, ನಾನು ಕನ್ನಡಿಗ ಎಂದು ಬರೆದಿರುವ ಟೀ ಶರ್ಟ್ ತೊಟ್ಟಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ನಾನು ಕನ್ನಡ ಮಾತನಾಡುವ ಭಾರತೀಯ ಎಂದು ನಟ ಪುನೀತ್‍ ರಾಜ್ ಕುಮಾರ್ ಹೇಳುವ ಟೀ ಶರ್ಟ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಿತ್ರರಂಗ ನಿರ್ದೇಶಕ ಕವಿರಾಜ್ ಎಂಬುವವರು ಪ್ರತಿಕ್ರಿಯಿಸಿದ್ದು, ನಾನು ಎಲ್ಲ ಭಾಷೆಗಳನ್ನು ಗೌರವಿಸುತ್ತೇನೆ. ಯಾವ ಭಾಷೆಯನ್ನು ದ್ವೇಷಿಸುವುದಿಲ್ಲ. ನಾನು ಹಿಂದಿ ಹಾಡು, ಘಜಲ್‍ಗಳನ್ನು ಇಷ್ಟ ಪಟ್ಟು ಕೇಳುತ್ತೇನೆ. ಹಿಂದಿ ಅಷ್ಟೇ ಅಲ್ಲ ಮಲಯಾಳಂ, ತಮಿಳು ಮುಂತಾದ ಭಾಷೆಗಳ ಒಳ್ಳೆ ಸಿನಿಮಾಗಳನ್ನು ನೋಡುತ್ತೇನೆ. ಅದು ನನ್ನ ಆಯ್ಕೆ. ಆದರೆ, ನನ್ನ ನಾಡಿನ ರಸ್ತೆ, ರೈಲ್ವೆ ಫಲಕ ಸರಕಾರಿ ಕಚೇರಿ, ಯೋಜನೆಗಳು, ಸರಕಾರಿ ಪ್ರಕಟನೆಯಲ್ಲಿ ಹಿಂದಿಯನ್ನು ತೂರಿಸಿದರೆ ಅದು ಹೇರಿಕೆ ಎಂದು ಹೇಳಿದ್ದಾರೆ.

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ಇರಬೇಕು. ಜೊತೆಗೆ ನಮ್ಮ ಸಂವಿಧಾನದ ಅನುಸಾರವಾಗಿ ಒಪ್ಪಿಕೊಂಡಿರುವ ಒಂದು ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಇರಬಹುದು. ಅದರೊಂದಿಗೆ ಇನ್ನೊಂದು ಭಾಷೆ ಇದ್ದರೆ ಏನಾಗುತ್ತದೆ? ಎಂದು ಹಿಂದಿಯನ್ನು ತೂರಿಸಿದರೆ ಅದು ಹೇರಿಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಭಾಷೆಗೆ ಸಿಕ್ಕ ಸ್ಥಾನಮಾನ ಕನ್ನಡಕ್ಕೂ ಸಿಗಬೇಕು. ಭಾಷಾ ಸಮಾನತೆಗಾಗಿ ಎಲ್ಲರೂ ಸೇರಿ ಉಗ್ರವಾದ ಹೋರಾಟ ಮಾಡಬೇಕು ಎಂದು ಅಭಿಪ್ರಾಯಿಸಿದ್ದರೆ, ಮತ್ತೊಂದಷ್ಟು ಜನರು ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ ಎಂದು ಗುಜರಾತ್ ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದಾರೆ.

ಕನ್ನಡ ಕಲಿಕಾ ಪುಸ್ತಕ ವಿತರಣೆ: ಅಂತರ್ ರಾಷ್ಟ್ರೀಯ ಹಿಂದಿ ದಿವಸ್ ಹಿನ್ನಲೆಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯ ವತಿಯಿಂದ ರಾಜ್ಯದ ಹಲವು ಕಡೆಗಳಲ್ಲಿ ಕೇಂದ್ರ ಸ್ವಾಮ್ಯದ ಕಚೇರಿ, ಬ್ಯಾಂಕ್‍ಗಳಿಗೆ ತೆರಳಿ ಕಡ್ಡಾಯ ಕನ್ನಡ ಬಳಕೆ ಮಾಡುವಂತೆ ಆಗ್ರಹಿಸಿ ಮನವಿ ಮಾಡಲಾಯಿತು ಹಾಗೂ ಕನ್ನಡ ಕಲಿಕಾ ಪುಸ್ತಕ ಮತ್ತು ಸಿಹಿ ವಿತರಣೆ ಮಾಡುವ ಮೂಲಕ ಕನ್ನಡ ದಿವಸ್ ಅನ್ನು ಆಚರಣೆ ಮಾಡಲಾಯಿತು

ಫಲಕದಲ್ಲಿದ್ದ ಹಿಂದಿ ಪದಗಳ ಧ್ವಂಸ: ಹಿಂದಿ ದಿವಸ್ ವಿರೋಧಿ ದಿನವನ್ನಾಗಿ ಎಲ್ಲೆಡೆ ಆಚರಣೆ ಮಾಡಲಾಗಿತು. ಅದರ ಭಾಗವಾಗಿ ಕನ್ನಡ ಪರ ಸಂಘಟನೆಗಳ ಮುಖಂಡರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿರುವ ನಿಲ್ದಾಣದ ಫಲಕದಲ್ಲಿದ್ದ ಹಿಂದಿ ಅಕ್ಷರಗಳನ್ನು ಧ್ವಂಸ ಮಾಡಿದರು. ಧಿಕ್ಕಾರ ಧಿಕ್ಕಾರ ಹಿಂದಿ ಹೇರಿಕೆಗೆ ಧಿಕ್ಕಾರ, ಮೊಳಗಲಿ ಮೊಳಗಲಿ ಕನ್ನಡ ಭಾಷೆ ಮೊಳಗಲಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News