ಐಪಿಎಸ್ ಅಧಿಕಾರಿಗಳಾದ ನಿಂಬಾಳ್ಕರ್, ಅಜಯ್ ಹಿಲೋರಿ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್
ಬೆಂಗಳೂರು, ಸೆ.14: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿಗಳಿಬ್ಬರ ಮೇಲೆ ಕಾನೂನು ಕ್ರಮಕ್ಕೆ ರಾಜ್ಯ ಸರಕಾರವು ಸಿಬಿಐಗೆ ಗ್ನೀನ್ ಸಿಗ್ನಲ್ ನೀಡಿದೆ.
ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಅಪರಾಧ ದಂಡ ಸಂಹಿತೆ ಸೆಕ್ಷನ್ 197, 170ರ ಅಡಿಯಲ್ಲಿ ಅನುಮತಿ ನೀಡಲಾಗಿದೆ ಎಂದು ಪ್ರಕಟನೆಯೊಂದಲ್ಲಿ ತಿಳಿಸಿದ್ದು, ಈ ಇಬ್ಬರು ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಐಎಂಎ ವಂಚನೆ ಪ್ರಕರಣ ಸಂಬಂಧ ಯಾವುದೇ ಅಕ್ರಮದಲ್ಲಿ ತೊಡಗಿಲ್ಲ ಎಂದು ವರದಿ ಸಲ್ಲಿಕೆ, ಹೆಚ್ಚಿನ ತನಿಖೆಗೆ ನಿರಾಸಕ್ತಿ ತೋರಿದ ಆರೋಪ ಹೇಮಂತ್ ನಿಂಬಾಳ್ಕರ್ ಮೇಲಿದೆ. ವಂಚನೆಯ ಬಗ್ಗೆ ರಿಸರ್ವ್ ಬ್ಯಾಂಕಿಗೆ ವರದಿ ಸಲ್ಲಿಸುವಲ್ಲಿ ವಿಳಂಬ ನೀತಿ ಮತ್ತು ಸಂಸ್ಥೆಯ ಮಾಲಕ ಮನ್ಸೂರ್ ಖಾನ್‍ರಿಂದ ಹಣ ಸ್ವೀಕಾರ ಆರೋಪವನ್ನು ಅಂದಿನ ವಲಯ ಡಿಸಿಪಿ ಅಜಯ್ ಹಿಲೋರಿ ಮೇಲೆ ಹೊರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಇನ್ಸ್ ಪೆಕ್ಟರ್ ಎಂ.ರಮೇಶ್, ಪಿಎಸ್ಸೈ ಗೌರಿ ಶಂಕರ್, ಸಿಐಡಿ ಡಿವೈಎಸ್ಪಿ ಇ.ಬಿ.ಶ್ರೀಧರ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿತ್ತು.
ವಿಚಾರಣೆ ಸಾಧ್ಯತೆ?: ರಾಜ್ಯ ಸರಕಾರವು ಕಾನೂನು ಕ್ರಮದಡಿ ಅನುಮತಿ ನೀಡಿರುವ ಹಿನ್ನೆಲೆ ಸಿಬಿಐ, ಈ ಇಬ್ಬರು ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.