ಪತ್ನಿಯ ಇಚ್ಛೆಗೆ ವಿರುದ್ಧವಾದ 2ನೇ ಮದುವೆ ಕ್ರೌರ್ಯ: ಹೈಕೋರ್ಟ್
ಬೆಂಗಳೂರು, ಸೆ.14: ಮುಸ್ಲಿಂ ಸಮುದಾಯದಲ್ಲಿ ಪತಿ ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ 2ನೆ ಮದುವೆಯಾದರೆ ಆತನ ನಡೆಯನ್ನು ಕ್ರೌರ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.
ವಿಜಯಪುರ ಜಿಲ್ಲೆಯ ಯೂಸುಫ್ ಪಟೇಲ್ ಪ್ರಕರಣದಲ್ಲಿ ಆತನ ಪತ್ನಿ ಕೌಟುಂಬಿಕ ದೌರ್ಜನ್ಯ ಅಡಿ ಕೋರಿದ್ದ ವಿಚ್ಛೇದನವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಮೊದಲ ಪತ್ನಿಯ ಒಪ್ಪಿಗೆ ಇಲ್ಲದೇ 2ನೆ ಮದುವೆಯಾದರೆ ಮೊದಲ ಪತ್ನಿಗೆ ಮಾನಸಿಕ ಕ್ರೌರ್ಯ ಉಂಟು ಮಾಡಬಲ್ಲದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಕ್ರೌರ್ಯಗಳಿಗೆ ಒಳಗಾಗುವ ಮೊದಲ ಪತ್ನಿ ಸುಲಭವಾಗಿ ವಿಚ್ಛೇದನದ ಮೊರೆ ಹೋಗಬಹುದು ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪತಿಯು ಪತ್ನಿಯ ಮೇಲೆ ನಡೆಸುವ ದೌರ್ಜನ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ ಎಂಬ ಧಾರ್ಮಿಕ ತಳಹದಿಯಲ್ಲಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಯಾವುದೇ ಮತಪಂಥಕ್ಕೆ ಸೇರಿದ ಮಹಿಳೆ ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದರೆ ಅದು ಕ್ರೌರ್ಯ ಮಾತ್ರವೇ ಆಗಿರುತ್ತದೆಯೇ ಹೊರತು ಬೇರೇನೂ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.