ವಸತಿ ಸಚಿವ ವಿ.ಸೋಮಣ್ಣ ರಾಜೀನಾಮೆಗೆ ಈಶ್ವರ್ ಖಂಡ್ರೆ ಆಗ್ರಹ

Update: 2020-09-14 16:23 GMT

ಬೆಂಗಳೂರು, ಸೆ.14: ಮುಂದಿನ ಜೂನ್ ಒಳಗಾಗಿ 30 ಸಾವಿರ ಮನೆಗಳನ್ನ ಅರ್ಹ ಫಲಾನುಭವಿಗಳಿಗೆ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವಸತಿ ಯೋಜನೆಗಳನ್ನು ಹಾಳು ಮಾಡಿ, ಇಂತಹ ಭಾವನಾತ್ಮಕ ಹೇಳಿಕೆಯ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುತ್ತಿರುವ ವಸತಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಸತಿ ಯೋಜನೆಯ ನಿಯಮಾನುಸಾರ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಬರಬೇಕಾದ ಹಣವನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ದುರುದ್ದೇಶದಿಂದಲೇ ತಡೆಯುತ್ತಿದೆ ಎಂದು ಆರೋಪಿಸಿದರು.

ವಸತಿ ಇಲಾಖೆಗೆ ಸೋಮಣ್ಣ ಬಂದ ಮೇಲೆ ಫಲಾನುಭವಿಗಳ ಅರ್ಹತೆಯ ಪುನರ್ ಪರಿಶೀಲನೆ ಮಾಡುತ್ತೇವೆ ಎಂಬ ನೆಪದಲ್ಲಿ ಫಲಾನುಭವಿಗಳ ಹಣವನ್ನು ಕೊಡಲು ವಿಳಂಬ ಮಾಡುತ್ತಿದೆ. ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಣ ಬಿಡುಗಡೆ ಮಾಡದೆ ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿದೆ ಎಂದು ಅವರು ದೂರಿದರು.

ಸೋಮಣ್ಣ ತಮ್ಮ ಖಾತೆಯನ್ನು ನಿರ್ವಹಿಸಲಾಗದೆ ಈಗ 'ಅಪಚಾರವಾಗಿದ್ದರೆ ನೇಣು ಹಾಕಿಕೊಳ್ಳಲು ಸಿದ್ಧ' ಎಂದು ಭಾವನಾತ್ಮಕ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಮತ್ತು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಆಗಿದ್ದ ವಸತಿ ಕ್ಷೇತ್ರದ ಪ್ರಗತಿಗೂ ಸೋಮಣ್ಣ ಸಚಿವರಾದ ಮೇಲೆ ಕಲ್ಲು ಹಾಕಿದ್ದಾರೆ. ಈಗಾಗಲೇ ಮನೆ ಕಟ್ಟಿಕೊಂಡಿರುವ ಬಡ ಅರ್ಹ ಫಲಾನುಭವಿಗಳಿಗೂ ಕಳೆದ ಒಂದೂ ಕಾಲು ವರ್ಷದಿಂದ ಒಂದಲ್ಲಾ ಒಂದು ನೆಪ ಹೇಳಿ ಹಣ ನೀಡುವುದನ್ನು ವಿಳಂಬ ಮಾಡಲಾಗುತ್ತಿದೆ ಎಂದು ಅವರು ಕಿಡಿಗಾರಿದರು.

ವಸತಿ ಯೋಜನೆಗೆ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. 2021ರ ಜೂನ್ ಒಳಗೆ ಮನೆ ಹಂಚಿಕೆ ಮಾಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮಣ್ಣ ಹೇಳಿಕೆ ನೀಡಿದ್ದಾರೆ. ಆದರೆ ಕೇವಲ 30 ಸಾವಿರ ಮನೆ ಪಡೆಯಲು ಬಡ ಜನರು ಮುಂದಿನ ವರ್ಷ ಜೂನ್ ವರೆಗೆ ಏಕೆ ಕಾಯಬೇಕು? ಕೇಂದ್ರ ಬಿಜೆಪಿ ಸರಕಾರ ತನ್ನ ಮೊದಲ ಅವಧಿಯಲ್ಲೆ ಎಲ್ಲರಿಗೂ ಸೂರು ನೀಡುವುದಾಗಿ ಘೋಷಿಸಿತ್ತು. ಆದರೆ 2020ರ ಕೊನೆಗೆ ಬಂದರೂ ಅದು ಸಾಧ್ಯವಾಗಿಲ್ಲ ಎಂದು ಈಶ್ವರ್ ಖಂಡ್ರೆ ಟೀಕಿಸಿದರು.

ಬಡವರಿಗೆ ಸ್ವಂತ ಮನೆ ಎನ್ನುತ್ತಿದ್ದ ಸರಕಾರ, ಈಗ ರಾಗ ಬದಲಾಯಿಸಿ ನಗರ ಪ್ರದೇಶಗಳ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವ ಯೋಜನೆ ರೂಪಿಸಲಾಗುವುದು ಎನ್ನುತ್ತಿದೆ. ಕಾಂಗ್ರೆಸ್ ಸರಕಾರ, ಗುಡಿಸಲು ಮುಕ್ತ ಕರ್ನಾಟಕದ ಗುರಿಯೊಂದಿಗೆ ಅನೇಕ ವಸತಿ ಯೋಜನೆಗಳನ್ನು ರೂಪಿಸಿತ್ತು. ರಾಜ್ಯ ಬಿಜೆಪಿ ಸರಕಾರ ಈ ಎಲ್ಲಾ ಯೋಜನೆಗಳನ್ನು ಹಳ್ಳ ಹಿಡಿಸಿದೆ. ಈ ಯೋಜನೆಗಳನ್ನು ದಾರಿ ತಪ್ಪಿಸಿದ ವಸತಿ ಸಚಿವ ಸೋಮಣ್ಣ ಭಾವನಾತ್ಮಕ ಹೇಳಿಕೆ ನೀಡುವ ಬದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದರು.

ಕೋವಿಡ್ ಬಿಕ್ಕಟ್ಟು ಎದುರಾದ ನಂತರ ಎರಡನೇ ಬಾರಿಗೆ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆಯಲ್ಲಿ ನಿರತರಾಗಿರುವ ವೈದ್ಯರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ವಿಫಲವಾಗಿದೆ. ಕೊರೋನ ಎರಡನೆ ಅಲೆ ಆರಂಭವಾಗಿರುವ ಹೊತ್ತಲ್ಲಿ ಸರಕಾರ ಕೂಡಲೇ ಎಚ್ಚೆತ್ತು ವೈದ್ಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News