ಡ್ರಗ್ಸ್ ಪ್ರಕರಣದ ಬಂಧಿತ ಆರೋಪಿ ಜೊತೆ ತಮ್ಮ ಫೋಟೋದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್

Update: 2020-09-14 17:00 GMT

ಬೆಂಗಳೂರು, ಸೆ. 14: ಹಲವು ವರ್ಷಗಳಿಂದ ಗೊಂದಲದಲ್ಲಿದ್ದ ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಭೂಮಿ ತಕರಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ವಿವಾದ ಇತ್ಯರ್ಥಪಡಿಸಿದ್ದು, ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಾಗೂ 3.3 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ 9.50 ಲಕ್ಷ ಹೆಕ್ಟರ್ ಭೂಮಿ ತಕರಾರಿತ್ತು. ಘೋಷಿತ ಅರಣ್ಯ ಪ್ರದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಡ್ವಕೇಟ್ ಜನರಲ್ ಸಲಹೆ ಪಡೆದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ ಎಂದರು.

ಫಲಾನುಭವಿಗಳಿಗೆ ಭೂಮಿ: ಅರಣ್ಯ ಇಲಾಖೆಗೆ ಸೇರಿದ ಕಂದಾಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿದ್ದು, ಇದೊಂದು ಸಮಸ್ಯೆಯಾಗಿತ್ತು. ಇದೀಗ ಅದಕ್ಕೆ ಪರಿಹಾರ ಹುಡುಕಿದ್ದು, ಫಲಾನುಭವಿಗಳಿಗೆ ಭೂಮಿ ನೀಡುವ ತೀರ್ಮಾನ ಮಾಡಲಾಗಿದೆ ಎಂದ ಅವರು, ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಈಗಾಗಲೇ ಪ್ರವಾಹ ಪೀಡಿತ ಎಂದು ಘೋಷಿಸಲಾಗಿದ್ದು, ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಹೆಚ್ಚಿನ ಮೊತ್ತದ ನೆರವಿಗೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಫೋಟೋ ಸರ್ವೆಸಾಮಾನ್ಯ: ಮಾದಕ ವಸ್ತುಗಳ (ಡ್ರಗ್ಸ್) ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ರಾಹುಲ್ ಜೊತೆಗಿನ ತಮ್ಮ ಫೋಟೋದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದು ಸರ್ವೆ ಸಾಮಾನ್ಯ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ನಾಮಕರಣ ಕಾರ್ಯಕ್ರಮವಿತ್ತು, ಆ ಸಂದರ್ಭದಲ್ಲಿ ಯಾರೋ ಫೋಟೋ ತೆಗೆದಿರಬಹುದು, ಸಾರ್ವಜನಿಕ ಬದುಕಿನಲ್ಲಿ ಇದ್ದಾಗ ಇವೆಲ್ಲವೂ ಸರ್ವೇಸಾಮಾನ್ಯ ಎಂದು ಸ್ಪಷ್ಟನೆ ನೀಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರ ಜೊತೆಗೂ ಅವರು ಫೋಟೋ ತೆಗೆದುಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ಜೊತೆ ಫೋಟೋ ಇದ್ದು, ನಗರದ ಪೊಲೀಸ್ ಆಯುಕ್ತರೊಂದಿಗೂ ಫೋಟೊ ತೆಗೆಸಿಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಅವರ ಜೊತೆ ಸಂಪರ್ಕದಲ್ಲಿದ್ದಾರೆಂಬ ಅರ್ಥ ಕಲ್ಪಿಸುವುದು ಸರಿಯಲ್ಲ. ಸಾರ್ವಜನಿಕ ಬದುಕಿನಲ್ಲಿದ್ದರೆ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ, ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಅಶೋಕ್ ವಿವರಿಸಿದರು.

ವಿದೇಶ ಪ್ರವಾಸಕ್ಕೆ ಹೋಗುವುದು ತಪ್ಪಲ್ಲ. ಆದರೆ, ಹವಾಲಾ, ಡ್ರಗ್ಸ್ ಪ್ರಕರಣದಲ್ಲಿ ತೊಡಗುವುದು ಅಪರಾಧ. ನನಗೆ ಇಸ್ಪೀಟ್ ಆಡುವುದು ಗೊತ್ತಿಲ್ಲ. ಇನ್ನು ಕ್ಯಾಸಿನೋ ಏನು ನೋಡಲಿ ಎಂದ ಅಶೋಕ್, ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಮುಸ್ಲಿಮ್ ನಾಯಕರಾಗಬೇಕು ಎಂದು ಎಲ್ಲ ವಿಚಾರಗಳನ್ನು ಮೈಮೇಲೆ ಏಳೆದುಕೊಳ್ಳುತ್ತಿದ್ದಾರೆ. ಡಿ.ಜೆ.ಹಳ್ಳಿ ಗಲಭೆ, ರಾಮಮಂದಿರ ಎಲ್ಲ ವಿಷಯಕ್ಕೂ ಝಮೀರ್ ಅಹ್ಮದ್ ಮುಂದೆ ಇರುತ್ತಾರೆಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News