ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ: ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

Update: 2020-09-14 17:05 GMT

ಬೆಂಗಳೂರು, ಸೆ.14: ಆರೆಸ್ಸೆಸ್ ಕಾರ್ಯಕರ್ತ ಆರ್.ರುದ್ರೇಶ್ ಹತ್ಯೆ ಪ್ರಕರಣದ ಆರೋಪಿ ಆಸೀಂ ಶರೀಫ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ವಿಶೇಷ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ) ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಕೈಬಿಡುವಂತೆ ಕೋರಿ ಆಸೀಂ ಶರೀಫ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ್ ಆರ್. ಹುಲಗಿ ಅವರಿದ್ದ ಪೀಠ, ಅರ್ಜಿ ವಜಾಗೊಳಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ನಮ್ಮ ಕಕ್ಷಿದಾರರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೊರೋನ ಹಿನ್ನೆಲೆಯಲ್ಲಿ ಅವರ ಜೀವಕ್ಕೆ ಅಪಾಯವಿದೆ. ವಯಸ್ಸಾದ ತಾಯಿ, ಪತ್ನಿ ಹಾಗೂ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಸರಕಾರದ ಪರ ವಾದಿಸಿದ ವಕೀಲರು, ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ. ಕೊರೋನ ಕಾರಣ ನೀಡಿ ಅವರಿಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಯನ್ನು ವಿಶೇಷ ಆಸ್ಪತ್ರೆಗೆ ದಾಖಲಿಸಬಹುದು ಅಥವಾ ಕಾರಾಗೃಹದಲ್ಲಿರುವ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಬೇಕೆಂದು ಸೂಚಿಸಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News