ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ತ್ವರಿತ ಭೂಸ್ವಾಧೀನ ಕಾರ್ಯ: ಸಚಿವ ಜಗದೀಶ್ ಶೆಟ್ಟರ್

Update: 2020-09-14 17:46 GMT

ಧಾರವಾಡ, ಸೆ.14: ಧಾರವಾಡ ಮತ್ತು ಬೆಳಗಾವಿ ಮಧ್ಯೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿರುವುದರಿಂದ, ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಸಮೀಕ್ಷೆ ಮಾಡಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೇಲ್ವೆ ಇಲಾಖೆಗೆ ನೀಡುವ ಕಾರ್ಯವನ್ನು ರಾಜ್ಯ ಸರಕಾರ ತ್ವರಿತವಾಗಿ ಕೈಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸೋಮವಾರ ನಗರದ ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯಲ್ಲಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ರೈಲು ಮಾರ್ಗದ ನಿರ್ಮಾಣದಿಂದ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಸರಕು ಸಾಗಣೆ ಕಾರ್ಯದಲ್ಲಿ ಭಾರೀ ಪ್ರಮಾಣದ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ. ಹೊಸ ರೈಲು ಮಾರ್ಗ ನಿರ್ಮಾಣದಿಂದ ಅಳ್ನಾವರ ಭಾಗದ ಜನತೆ ಆತಂಕಕ್ಕೀಡಾಗುವ ಅಗತ್ಯವಿಲ್ಲ. ಆ ಮಾರ್ಗದಲ್ಲಿನ ಪ್ರಯಾಣಿಕರಿಗೆ ರೈಲ್ವೇ ಸೌಕರ್ಯಗಳು ಕುಂಠಿತವಾಗುವುದಿಲ್ಲ ಎಂದು ಅವರು ಹೇಳಿದರು.

ಮುಂಬಯಿ-ಬೆಂಗಳೂರು ಮಧ್ಯೆ ಬೃಹತ್ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಹಾಗೂ ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನು ಭೇಟಿಯಾಗಲು ಪೂರ್ವನಿಗದಿತ ಭೇಟಿ ಸಮಯ ಪಡೆದುಕೊಂಡ ಹಿನ್ನೆಲೆಯಲ್ಲಿ ಹೊಸದಿಲ್ಲಿಗೆ ತೆರಳಿದ್ದೆ. ಈ ಭೇಟಿ ಸಂಪೂರ್ಣವಾಗಿ ಇಲಾಖೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದೆ. ಯಾವುದೇ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ಜಗದೀಶ್ ಶೆಟ್ಟರ್ ಸ್ಪಷ್ಟ ಪಡಿಸಿದರು.

ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳಿಗೆ ಆಮ್ಲಜನಕ ಕೊರತೆಯುಂಟಾಗಿರುವುದು ತಿಳಿದು ಬಂದಿದೆ. ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗಿರುವುದರಿಂದ ಜೀವ ರಕ್ಷಣೆ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಆಮ್ಲಜನಕ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ. ಆಮ್ಲಜನಕ ಉತ್ಪಾದನೆಯಲ್ಲಿ ಕುಂಠಿತವಾಗಿಲ್ಲ. ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆ ತಾತ್ಕಾಲಿಕವಾದುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News