ಖಾಸಗಿ ಶಾಲೆಗಳಿಗೆ ಆರ್‌ಟಿಇ ಬಾಕಿ ಹಣವನ್ನು ಪಾವತಿಸಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2020-09-15 12:06 GMT

ಬೆಂಗಳೂರು, ಸೆ.15: ಆರ್‌ಟಿಇ ಹಣ ಮರು ಪಾವತಿ ಮಾಡದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಖಾಸಗಿ ಶಾಲೆಗಳಿಗೆ ಆರ್‌ಟಿಇ ಬಾಕಿ ಹಣವನ್ನು ಮೂರು ತಿಂಗಳೊಳಗೆ ಪಾವತಿಸಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, 2018-19, 2019-20 ಹಾಗೂ 2020-21ನೆ ಶೈಕ್ಷಣಿಕ ವರ್ಷದ ಆರ್‌ಟಿಇ ಶುಲ್ಕದ ಹಣವನ್ನು ಸರಕಾರ ಪೂರ್ಣವಾಗಿ ಮರು ಪಾವತಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ 3,655 ಶಾಲೆಗಳಿವೆ. 55 ಸಾವಿರಕ್ಕೂ ಅಧಿಕ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದು, ಹದಿನೈದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಳೆದ ಎಪ್ರಿಲ್ ಮತ್ತು ಜೂನ್ ಅವಧಿಯಲ್ಲಿ ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರಕಾರ, ಯಾವುದೇ ಶುಲ್ಕವನ್ನು ಪಾವತಿಸಬೇಡಿ ಎಂದು ಪೋಷಕರಿಗೆ ತಿಳಿಸಿತ್ತು.

ಯಾರೂ ಶುಲ್ಕ ಪಾವತಿಸದ ಕಾರಣ ಶಿಕ್ಷಕರಿಗೆ ವೇತನ ನೀಡಲು ಕಷ್ಟವಾಗಿದೆ. ಜೊತೆಗೆ, ಸರಕಾರವೂ ಆರ್‌ಟಿಇ ಹಣ ಮರು ಪಾವತಿ ಮಾಡಿಲ್ಲ. ಇದರಿಂದ, ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಸೂಚನೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಖಾಸಗಿ ಶಾಲೆಗಳಿಗೆ ಆರ್‌ಟಿಇ ಬಾಕಿ ಹಣವನ್ನು ಮೂರು ತಿಂಗಳೊಳಗೆ ಪಾವತಿಸಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News