ದಂತ ವೈದ್ಯಕೀಯ ಸೀಟುಗಳಲ್ಲಿ ಅಕ್ರಮ: 4 ಕಾಲೇಜುಗಳಿಗೆ 8.20 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್

Update: 2020-09-15 13:28 GMT

ಕಲಬುರಗಿ, ಸೆ.15: ಮಾಪ್ ಅಪ್ ಸುತ್ತು(ಎರಡು ಸುತ್ತುಗಳ ನಂತರ ಉಳಿದ ಸೀಟುಗಳು) ಬಳಿಕ ಉಳಿದ ಸರಕಾರಿ ಕೋಟಾದ ದಂತ ವೈದ್ಯಕೀಯ ಸೀಟುಗಳಿಗೆ 82 ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶಕ್ಕೆ ಅವಕಾಶ ನೀಡಿದ್ದ ಉ-ಕ ಭಾಗದ ಪ್ರತ್ಯೇಕ ನಾಲ್ಕು ದಂತ ವೈದ್ಯ ಕಾಲೇಜುಗಳಿಗೆ 8.20 ಕೋಟಿ ರೂ. ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ಸರಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವಿವಾದಿತ 82 ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶ ಅನುಮೋದನೆಗೆ ನಿರಾಕರಿಸಿದ್ದ ಆದೇಶ ರದ್ದು ಕೋರಿ ಹಲವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ಕಲಬುರಗಿ ಪೀಠ, ಈ ಆದೇಶ ನೀಡಿತು.

ಬೀದರ್ ನ ಎಸ್.ಬಿ.ಪಾಟೀಲ್ ದಂತ ಕಾಲೇಜು ಮತ್ತು ಆಸ್ಪತ್ರೆ, ಎಸ್.ಬಿ. ಪಾಟೀಲ್ ದಂತ ವಿಜ್ಞಾನಗಳ ಹಾಗೂ ಸಂಶೋಧನಾ ಸಂಸ್ಥೆ, ಕಲಬುರಗಿಯ ಹುಮ್ನಾಬಾದ್ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಶಿಕ್ಷಣ ಟ್ರಸ್ಟ್ ನ ದಂತ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಎಸ್. ನಿಜಲಿಂಗಪ್ಪ ದಂತ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಗಳು ಮತ್ತು ಪ್ರವೇಶ ಅನುನೋದನೆ ಸಿಗದ 82 ವಿದ್ಯಾರ್ಥಿಗಳು ಹೈಕೋರ್ಟ್ ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿ ಆದೇಶ ನೀಡಿರುವ ನ್ಯಾಯಪೀಠ, ಖಾಲಿ ಉಳಿದ ಸರಕಾರಿ ಕೋಟಾದಡಿಯ ಸೀಟುಗಳಿಗೆ ಅಕ್ರಮವಾಗಿ 82 ವಿದ್ಯಾರ್ಥಿಗಳನ್ನು ಸೇರಿಸಿದ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಲೆಕ್ಕದಲ್ಲಿ ತಲಾ 10 ಲಕ್ಷ ರೂ.ದಂಡವನ್ನು ಎರಡು ತಿಂಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

ದಂಡ ಪಾವತಿ ವಿಳಂಬವಾದರೆ ತಿಂಗಳಿಗೆ ಶೇ.2ರಷ್ಟು ಬಡ್ಡಿ ಪಾವತಿಸಬೇಕೆಂದೂ ಕೋರ್ಟ್ ಎಚ್ಚರಿಸಿದೆ. ಕಾಲೇಜುಗಳು ಪಾವತಿಸುವ ದಂಡವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ/ಕೋವಿಡ್ ಪರಿಹಾರ ನಿಧಿಗೆ ವರ್ಗಾಯಿಸಲು ರಿಜಿಸ್ಟ್ರಾರ್ ಗೆ ಸೂಚಿಸಿದೆ. ದಂಡ ಪಾವತಿಸದಿದ್ದರೆ ಕಾಲೇಜುಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರ್ಟ್ ಆದೇಶಿಸಿದೆ.

ಇದರ ಜತೆಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮೋದನೆ ನಿರಾಕರಿಸಿದ್ದ ರಾಜೀವ್‍ಗಾಂಧಿ ವಿವಿ ಕ್ರಮವನ್ನು ರದ್ದುಪಡಿಸಿದೆ. ಆದರೆ, ತಾವು ಪದವಿ ಮುಗಿಸಿದ ನಂತರ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ನಿರ್ವಹಿಸುವುದಾಗಿ ವಿದ್ಯಾರ್ಥಿಗಳು ವೈಯಕ್ತಿಕವಾಗಿ ದೃಢೀಕರಿಸಿ ಸರಕಾರ ಮತ್ತು ಆರ್‍ಜಿಯುಎಚ್‍ಎಸ್‍ಗೆ ಎರಡು ತಿಂಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ನಂತರ ವಿದ್ಯಾರ್ಥಿಗಳ ಪ್ರವೇಶವನ್ನು ಅನುಮೋದಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News