ಸರಕಾರದಿಂದ ಬೇಡಿಕೆಗಳ ನಿರ್ಲಕ್ಷ್ಯ ಆರೋಪ: ಅಸಹಕಾರ ಮುಷ್ಕರ ಆರಂಭಿಸಿದ ಸರಕಾರಿ ವೈದ್ಯರು
ಬೆಂಗಳೂರು, ಸೆ.15: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವೈದ್ಯರು ಮಂಗಳವಾರದಿಂದ ಸರಕಾರಿ ಸಭೆ ಬಹಿಷ್ಕರಿಸಿ ಅಸಹಕಾರ ಮುಷ್ಕರ ಆರಂಭಿಸಿದ್ದಾರೆ.
ಸರಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯ ನಿರ್ಧಾರದಂತೆ ಸೋಮವಾರ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಂತೆಯೇ ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನೂ ಭೇಟಿ ಮಾಡಿ ಮನವಿ ಪತ್ರ ನೀಡಿದರು. ಆದರೆ, ಸೂಕ್ತ ಭರವಸೆ ಸಿಗಲಿಲ್ಲ ಎನ್ನಲಾಗಿದ್ದು, ಹೀಗಾಗಿ ಮುಷ್ಕರ ನಡೆಸಲಾಗುತ್ತಿದೆ.
ಕೊರೋನ ಸೇರಿದಂತೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ಅಂಕಿ-ಅಂಶ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡದಿರಲು ವೈದ್ಯರು ನಿರ್ಧರಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರಕಾರಕ್ಕೆ ತಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಸೆ.20ರವರೆಗೆ ಕಾಲಾವಕಾಶ ನೀಡಿದ್ದು, ಸೂಕ್ತ ಭರವಸೆ ದೊರೆಯದಿದ್ದರೆ ಸೆ.21 ರಿಂದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆ (ಒಪಿಡಿ) ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಅಡಿಯಲ್ಲಿ 4,968 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರಕಾರದ ಆರೋಗ್ಯ ಯೋಜನೆ(ಸಿಜಿಎಚ್‍ಎಸ್) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕೊರೋನ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೋನ ಸೋಂಕು ದೃಢಪಡದಿದ್ದರೂ ಪರಿಹಾರ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ವೈದ್ಯರ ಸಂಘ ಒತ್ತಾಯಿಸಿದೆ.
ಮಂಗಳವಾರದಿಂದ ಕೊರೋನ ಸೋಂಕಿತರು, ಡೆಂಗ್, ಚಿಕೂನ್‍ಗುನ್ಯಾ, ಎಚ್1ಎನ್1 ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳ ಮಾಹಿತಿ ದೊರೆಯುವುದಿಲ್ಲ. ಜೊತೆಗೆ ಟಿಬಿ, ಕುಷ್ಟರೋಗ, ತಾಯಂದಿರು ಮತ್ತು ಮಕ್ಕಳ ಸಾವು, ಜಂತುಹುಳು ಮಾತ್ರೆ ವಿತರಣೆ, ಹೆರಿಗೆ ವಿವರ ಸೇರಿದಂತೆ ಆಸ್ಪತ್ರೆಗಳಲ್ಲಿ ನಡೆಯುವ ಚಿಕಿತ್ಸೆಯ ವಿವರಗಳು ಹಾಗೂ ಆರೋಗ್ಯ ಕಾರ್ಯಕರ್ತರು ನಡೆಸುವ ಆರೋಗ್ಯ ಕುರಿತು ಸಮೀಕ್ಷೆ ಮತ್ತು ಜಾಗೃತಿ ಕಾರ್ಯಕ್ರಮಗಳ ಯಾವುದೇ ವರದಿ ನೀಡದಿರಲು ನಿರ್ಧರಿಸಿದ್ದಾರೆ.
ಸೆ.21ರಂದು ತುರ್ತುಚಿಕಿತ್ಸೆ ಹೊರತುಪಡಿಸಿ, ಹೊರ ರೋಗಿಗಳ ಸೇವೆ ಸಂಪೂರ್ಣ ಸ್ಥಗಿತಗೊಳಿಸಿ 'ಬೆಂಗಳೂರು ಚಲೋ' ಜಾಥಾ ನಡೆಸಲಾಗುವುದು. ಈ ವೇಳೆ ತುರ್ತುಚಿಕಿತ್ಸೆ, ಕೊರೋನ ಸೇವೆಯಲ್ಲಿ ವ್ಯತ್ಯಯ ಮಾಡುವುದಿಲ್ಲ ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್ ಹೇಳಿದ್ದಾರೆ.