ಕೋಲಾರ ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: 25 ವರ್ಷಗಳಿಂದ ಬಿಡುಗಡೆಗೆ ಕಾಯುತ್ತಿರುವ ಕುಟುಂಬ

Update: 2020-09-15 17:58 GMT

ಕೋಲಾರ, ಸೆ.15: ಸುಮಾರು 25 ವರ್ಷಗಳಿಂದ ಒಂಟಿ ಮನೆ ಎಸ್ಟೇಟ್‌ನಲ್ಲಿ ಖೈದಿಗಳಂತೆ ಜೀತಕ್ಕಿದ್ದ ಕುಟುಂಬವೊಂದು ತಮ್ಮ ಬಿಡುಗಡೆಗಾಗಿ ಅಲವತ್ತುಕೊಂಡ ಪ್ರಕರಣ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ದೊಡ್ಡಪನ್ನಾಂಡಹಳ್ಳಿ ಗ್ರಾಮದ ಕೃಷ್ಣಪ್ಪ(65) ಎಂಬವರು ಪತ್ನಿ ರುಕ್ಕಮ್ಮ (55) ಹಾಗೂ ಮಗಳು ಸಂಜನಾ (13) ಜೊತೆ ಕೋಲಾರ ರಸ್ತೆಯಲ್ಲಿರುವ ಹುದುಕುಳ ಗ್ರಾಮದ ಶಿವಾನಂದ ಎಂಬವವರ ಗಂಗಾ ಎಸ್ಟೇಟ್‌ನಲ್ಲಿ ಜೀತ ಮಾಡುತ್ತಿರುವುದು ತಿಳಿದುಬಂದಿದೆ.

ಈ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿದ ಬಂಗಾರಪೇಟೆ ಜೀವಿಕ ಸಂಘಟನೆ ಕಾರ್ಯಕರ್ತರು, ಸದರಿ ವಿಷಯವನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸಿ.ಸತ್ಯಬಾಮ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಅವರಿಗೆ ಗ್ರೌಂಡ್ ರಿಪೋರ್ಟ್ ನೀಡುವಂತೆ ಸೂಚಿಸಿದ್ದರು.

ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಜಿಪಂ ಉಪ ಕಾರ್ಯದರ್ಶಿ ಕೆ. ಸಂಜೀವಪ್ಪ, ಹಲವು ಅಧಿಕಾರಿಗಳೊಂದಿಗೆ ಸತ್ಯಾಂಶ ತಿಳಿಯಲು ಗಂಗಾ ಎಸ್ಟೇಟ್‌ಗೆ ಭೇಟಿ ನೀಡಿ ಜೀತಕ್ಕಿದ್ದ ಕುಟುಂಬದವರ ಜೊತೆ ವಾತನಾಡಿ, ಮಾಹಿತಿ ಪಡೆದುಕೊಂಡರು.

ಈ ಸಂದಭರ್ದಲ್ಲಿ ಬಂಗಾರಪೇಟೆ ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ, ಚಿಕ್ಕಅಂಕಂಡಹಳ್ಳಿ ಪಿಡಿಒ ಚಿತ್ರಾವತಿ, ಕಸಬಾ ಕಂದಾಯ ವೃತ್ತದ ರಾಜಸ್ವ ನಿರೀಕ್ಷಕ ಅಜ್, ಜೀವಿಕ ಒಕ್ಕೂಟದ ಅಧ್ಯಕ್ಷ ಹಿರೇಕರಪನಹಳ್ಳಿ ವಿ.ಯಲ್ಲಪ್ಪ, ಜೀವಿಕ ಗ್ರಾಮ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ.ರಾಮಚಂದ್ರಪ್ಪ, ಜೀವಿಕ ಒಕ್ಕೂಟದ ತಾಲೂಕು ಅಧ್ಯಕ್ಷ ಕಳ್ಳಿಕುಪ್ಪ ತಿಪ್ಪಣ್ಣ, ಒಕ್ಕೂಟದ ಮುಖಂಡ ಆನಂದ್ ಸೇರಿದಂತೆ ಹುದುಕುಳ ಕಂದಾಯ ವ್ಯಾಪ್ತಿಯ ಉಪಸ್ಥಿತರಿದ್ದರು.

25 ವರ್ಷಗಳ ಹಿಂದೆ ನಾರಾಯಣಪ್ಪ ಎಂಬವರು ಇಲ್ಲಿ ಕೆಲಸಕ್ಕೆ ಸೇರಿಸಿದ್ದರು. ಪ್ರಾರಂಭದಲ್ಲಿ ಕೆಲವು ದಿನ ಕೂಲಿಯನ್ನು ನೀಡಿದ್ದರು. ಬಳಿಕ ಕೂಲಿ ಕೊಡಲೇ ಇಲ್ಲ. ಊಟಕ್ಕೆ ದಿನಸಿಯನ್ನೂ ಸಹ ಕೊಡಲಿಲ್ಲ. ಎಸ್ಟೇಟ್ ಮಾಲಕ ಮರಿಯಪ್ಪ (ಉ) ಶಿವಾನಂದ ಅವರ ಮನಸ್ಸಿಗೆ ತೋಚಿದಾಗ ಒಂದಿಷ್ಟು ದಿನಸಿ ಅಥವಾ ಕಾಸು ಕೊಡ್ತಾ ಇದ್ದರು. ಕೆಲವು ವರ್ಷಗಳಿಂದ ಅದೂ ಕೂಡ ಕೊಡುತ್ತಿಲ್ಲ. ವಾಪಸ್ ಹೋಗಲು ಗ್ರಾಮದಲ್ಲೂ ಏನೂ ಇಲ್ಲ. ಇಷ್ಟು ವರ್ಷಗಳ ಕಾಲ ದುಡಿದ ನಮ್ಮ ಕುಟುಂಬಕ್ಕೆ ಈಗಲಾದರೂ ದುಡಿದಿರುವ ಕೂಲಿ ಹಣ ಕೊಟ್ಟು ಕಳಿಸಿಕೊಟ್ಟರೆ ನಮ್ಮೂರಿಗೆ ವಾಪಸ್ ಹೋಗಲು ಸಿದ್ಧರಿದ್ದೇವೆ.
-ಕೃಷ್ಣಪ್ಪ, ಗಂಗಾ ಎಸ್ಟೇಟ್‌ನಲ್ಲಿ ಜೀತಕ್ಕಿದ್ದವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News