ಹಿಂದಿ ದಿವಸ್ ಗೆ ವಿರೋಧ: ವೈರಲ್ ಆದ ತನ್ನ ಫೋಟೋದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂತೋಷ್ ಹೆಗ್ಡೆ

Update: 2020-09-15 18:06 GMT

ಬೆಂಗಳೂರು, ಸೆ.15: ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಪ್ರಕಟಿಸುವ ಉದ್ದೇಶದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆಯ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಸೋಮವಾರದಂದು ಕೇಂದ್ರ ಸರಕಾರ ಎಲ್ಲೆಡೆ ಹಿಂದಿ ದಿವಸ್ ಆಚರಣೆ ಮಾಡಲಾಯಿತು. ಅದರ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ನಟ-ನಟಿಯರು, ವಿದ್ಯಾರ್ಥಿ-ಯುವಜನರು ಸೇರಿದಂತೆ ಹಲವರು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಇದೇ ವೇಳೆ ಕೆಲವರು ಸಂತೋಷ್ ಹೆಗ್ಡೆ ಅವರ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಸಂತೋಷ್ ಹೆಗ್ಡೆ ಅವರು ಟಿ-ಶರ್ಟ್ ಧರಿಸಿದ್ದು, ಅದರ ಮೇಲೆ ‘ನಾವು ಕನ್ನಡಿಗರು, ಹಿಂದಿ ಕಲಿಯಲ್ಲ ಏನಿವಾಗ?’ ಎಂಬ ಬರಹವಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಫೋಟೋದಲ್ಲಿರುವ ಮುಖ ನನ್ನದೇ. ಆದರೆ, ನಾನು ಆ ಟಿ-ಶರ್ಟ್ ಧರಿಸಿಲ್ಲ. ಫೋಟೋ ಶಾಪ್ ಮೂಲಕ ಹೀಗೆ ಮಾಡಿರಬಹುದು. ಯಾಕೆ ಹೀಗೆ ಮಾಡುತ್ತಾರೋ ನನಗೆ ತಿಳಿದಿಲ್ಲ ಎಂದಿದ್ದಾರೆ.

ಇನ್ನು ಹಿಂದಿ ಭಾಷೆ ಹೇರಿಕೆ ಕುರಿತು ಮಾತನಾಡಿದ ನ್ಯಾ. ಸಂತೋಷ್ ಹೆಗ್ಡೆ, ನಮ್ಮ ರಾಜ್ಯದಲ್ಲಿ ಕನ್ನಡವೇ ಎಲ್ಲವೂ ಆಗಿದೆ. ಹಿಂದಿ ಹೇರಿಕೆ ಮಾಡುವುದು ತಪ್ಪು. ಇಷ್ಟವಿದ್ದವರು ಅದನ್ನು ಕಲಿಯಲಿ, ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡುವುದು ಸರಿಯಲ್ಲ. ಅದನ್ನು ಒಪ್ಪುವುದೂ ಸಾಧ್ಯವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News