ಸೆ.18 ರಿಂದ 21ರವರೆಗೆ ‘ಕರ್ನಾಟಕ ಕಲ್ಯಾಣ’ ಯಾತ್ರೆ: ಸಂಯುಕ್ತ ಜನತಾದಳ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್

Update: 2020-09-16 12:29 GMT

ಬೆಂಗಳೂರು, ಸೆ.16: ಸಂಯುಕ್ತ ಜನತಾದಳ ಪಕ್ಷ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಪಕ್ಷ ಮತ್ತು ಪುನರ್ ಸಂಘಟನೆಗಾಗಿ ‘ಕರ್ನಾಟಕದ ಕಲ್ಯಾಣ’ ಯಾತ್ರೆಯನ್ನು ಸೆ.18ರಿಂದ 21ರವರೆಗೆ ಕೋಲಾರದಿಂದ ಬೆಂಗಳೂರಿನವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದ್ದಾರೆ.

ಸೆ.18ರಂದು ಬೆಳಗ್ಗೆ 10 ಗಂಟೆಗೆ ಕೋಲಾರ ನಗರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ಚಿಂತಕರು ಹಾಗೂ ಸಾರ್ವಜನಿಕರೊಂದಿಗೆ ಆರಂಭಗೊಳ್ಳುವ ಪಾದಯಾತ್ರೆ ಬೆಂಗಳೂರಿನ ಗಾಂಧಿ ನಗರದ ಮೌರ್ಯ ವೃತ್ತದಲ್ಲಿ ಇರುವ ಮಹಾತ್ಮಗಾಂಧೀಜಿಯವರ ಪ್ರತಿಮೆ ಮುಂದೆ ಸೆ.21ರಂದು ಸಮಾಪ್ತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರ ಆತುರಾತುರದಲ್ಲಿ ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ತರುವುದರ ಮೂಲಕ ತಾನು ಉಳ್ಳವರು ಮತ್ತು ಉದ್ಯಮಿಗಳ ಪರವಾಗಿ ತನ್ನ ಧೋರಣೆಯನ್ನು ಪ್ರಚುರಪಡಿಸಿದೆ. ಎಪಿಎಂಸಿಗಳ ಸ್ಥಾನವನ್ನು ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಆಕ್ರಮಿಸಿಕೊಳ್ಳುವುದರ ಮುಖಾಂತರ ಎಪಿಎಂಸಿ ಮಳಿಗೆಗಳು ಶಾಶ್ವತವಾಗಿ ಮುಚ್ಚಲ್ಪಡುತ್ತವೆ. ಎಪಿಎಂಸಿ ಗಳಲ್ಲಿ ಕೆಲಸ ಮಾಡುತ್ತಿದ್ದ ಸಹಸ್ರಾರು ಕೃಷಿ ಕಾರ್ಮಿಕರ ಬದುಕು ದುರ್ಬರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭೂಸುಧಾರಣೆ ಕಾಯ್ದೆಯಿಂದಾಗಿ ರೈತರ ಜಮೀನು ಯಾರೂ ಬೇಕಾದರೂ ಕ್ರಯಕ್ಕೆ ಪಡೆಯಬಹುದು, ಇಂತಹ ಕಾಯ್ದೆಯಿಂದಾಗಿ ತನ್ನ ಜಮೀನನ್ನು ಮಾರಿಕೊಂಡ ರೈತ ಅದೇ ಜಮೀನಿನಲ್ಲಿ ಕೃಷಿ ಕಾರ್ಮಿಕನಾಗಿ ದುಡಿಯುವಂತ ದೈನೇಷಿ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರ ಈ ಕಾಯ್ದೆಯ ಮೂಲಕ ಮತ್ತೊಮ್ಮೆ ಜಮೀನ್ದಾರಿ ಪದ್ದತಿಯನ್ನು ಬೆಂಬಲಿಸುತ್ತಿದೆ. ರಾಜ್ಯ ಸರಕಾರದ ಮತ್ತೊಂದು ಅವಗಡ ಎಂದರೆ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗೆ ಬರುವ ಆಸ್ತಿಗಳನ್ನು ಪರಬಾರೆ ಮಾಡುವ ತೀರ್ಮಾನಕ್ಕೆ ಬಂದಿರುವುದು ನಿಜಕ್ಕೂ ದುರಂತವೇ ಸರಿ ಎಂದು ಅವರು ತಿಳಿಸಿದ್ದಾರೆ.

ರಾಜ್ಯವು ಕೈಗಾರಿಕ ರಂಗದಲ್ಲಿ 8ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಇಳಿದಿದ್ದು ಆತಂತಕ್ಕೆ ದೂಡಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದಂತಾಗಿದೆ. ಒಟ್ಟಾರೆಯಾಗಿ ಇನ್ನು ಅನೇಕ ಜ್ವಲಂತ ಸಮಸ್ಯೆಗಳಿಂದ ಕರ್ನಾಟಕ ರಾಜ್ಯ ಮತ್ತು ರಾಜ್ಯದ ಜನತೆ ತತ್ತರಿಸಿದೆ. ಈ ಎಲ್ಲ ಸಮಸ್ಯೆಗಳಿಂದ ರಾಜ್ಯವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಪಕ್ಷ ಹಾಗೂ ಜನತಾ ಪರಿವಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಮುಖಾಂತರ ಕಾರ್ಯ ತತ್ಪರವಾಗಿದೆ ಎಂದು ಮಹಿಮ ಪಟೇಲ್ ತಿಳಿಸಿದ್ದಾರೆ.

ರಾಜ್ಯದ ಜನತೆ ಶಾಂತಿ, ಸಹಬಾಳ್ವೆ, ಕೋಮು ಸಾಮರಸ್ಯ, ಭಯ ಮುಕ್ತ ವಾತಾವಣದಲ್ಲಿ ಜೀವಿಸಲು ಅವಕಾಶ ಕಲ್ಪಸುವುದು. ಒಟ್ಟಾರೆಯಾಗಿ ‘ಸಮರಸವೇ ಜೀವನ’ ಮತ್ತು ‘ಸರ್ವೇಜನಾ ಸುಖೀನೋಭವಂತು’ ಎಂಬ ಸಂಕಲ್ಪದೊಂದಿಗೆ ನಾವು ಮತ್ತು ನಮ್ಮ ಪಕ್ಷ ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಠಿಯಿಂದ ‘ಕರ್ನಾಟಕದ ಕಲ್ಯಾಣ’ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಮಹಿಮಾ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News